ಉತ್ತರ ಕನ್ನಡದಲ್ಲಿ ರೆಡ್ ಎಲರ್ಟ್ ಘೋಷಣೆ, ಉಳಿದೆಡೆಗೆ ಆರೆಂಜ್ ಎಲರ್ಟ್
ಮಂಗಳೂರು, ಜುಲೈ 06, 2023 (ಕರಾವಳಿ ಟೈಮ್ಸ್) : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ-ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಮೂರು ದಿನಗಳಿಂದ ರಜೆ ವಿಸ್ತರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಗುರುವಾರವೂ ಧಾರಾಕಾರ ಮಳೆಯಾಗುವ ಸೂಚನೆಯಿದೆ.
ಹವಾಮಾನ ವರದಿಯ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಜುಲೈ 6 ರ ಗುರುವಾರ ಕೂಡಾ 13 ಕಡೆಗಳಲ್ಲಿ ಅತಿ ಭಾರೀ ಮಳೆ, 11 ಕಡೆ ಭಾರೀ ಮಳೆ ಮತ್ತು ಹಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ತಲಾ 3 ಕಡೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಬುಧವಾರ ದಕ್ಷಿಣ ಗುಜರಾತಿನಿಂದ ಉತ್ತರ ಕೇರಳದ ಕರಾವಳಿಗೆ ಸೇರಿರುವ ಸಮುದ್ರ ಪ್ರದೇಶದಲ್ಲಿ ವಾಯುಭಾರ ಕುಸಿತದಿಂದಾಗಿ ಇನ್ನೂ 5 ದಿನಗಳ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.
ಮೇ 6 ಗುರುವಾರದಂದು ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಧಾರವಾಡ, ಗದಗ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೇ 7ರಂದು ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬುಧವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ ಮತ್ತು ಶಿರಾಲಿಯಲ್ಲಿ ತಲಾ 18 ಸೆಂ.ಮೀ. ಮಳೆಯಾಗಿದ್ದು, ದಕ್ಷಿಣ ಕನ್ನಡದ ಮುಲ್ಕಿಯಲ್ಲಿ 17 ಸೆಂ.ಮೀ, ಬೆಳ್ತಂಗಡಿಯಲ್ಲಿ 16 ಸೆಂ.ಮೀ ಮಳೆಯಾಗಿದ್ದರೆ ಉಡುಪಿ ಜಿಲ್ಲೆಯ ಉಡುಪಿ ಮತ್ತು ಕಾರ್ಕಳದಲ್ಲಿ ತಲಾ 15 ಸೆಂ.ಮೀ. ಮಳೆಯಾಗಿದೆ. ಉತ್ತರ ಒಳನಾಡಿನ ಕಲಬುರಗಿ ಜಿಲ್ಲೆಯ ಉಧೋಣಿಯಲ್ಲಿ 11 ಸೆಂ.ಮೀ, ಬೀದರ್ ಜಿಲ್ಲೆ ನಿರ್ಣಾದಲ್ಲಿ 10 ಸೆಂ.ಮೀ, ಕಲಬುರಗಿ ಜಿಲ್ಲೆಯ ಅಡಕೆಯಲ್ಲಿ 10 ಸೆಂ.ಮೀ. ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 9 ಸೆಂ.ಮೀ, ಕೊಡಗು ಜಿಲ್ಲೆ ಭಾಗಮಂಡಲದಲ್ಲಿ 8 ಸೆಂ.ಮೀ, ಚಿಕ್ಕಮಗಳೂರು ಜಿಲ್ಲೆ ಕಮ್ನಾಡಿಯಲ್ಲಿ 7 ಸೆಂ.ಮೀ. ಮಳೆಯಾಗಿದೆ. ಅದು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.
0 comments:
Post a Comment