ಬಂಟ್ವಾಳ, ಜುಲೈ 08, 2023 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ನಂದಾವರ ಗುಂಪುಮನೆ ಎಂಬಲ್ಲಿ ಶುಕ್ರವಾರ (ಜುಲೈ 7) ಮುಂಜಾನೆ ಮನೆಯೊಂದರ ಮೇಲೆ ಗುಡ್ಡ ಕುಸಿದು ತಾಯಿ ಮೃತಪಟ್ಟು, ಪುತ್ರಿ ಗಾಯಗೊಂಡ ಘಟನಾ ಸ್ಥಳಕ್ಕೆ ಘಟನೆ ನಡೆದ ದಿನವೇ ಭೇಟಿ ನೀಡಿದ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ನೇತೃತ್ವದ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆಯ ಸುತ್ತಲೂ ಹೆಜ್ಜೆ ಹಾಕಿ ದುರಂತ ನಡೆಯಲು ಕಾರಣದ ಬಗ್ಗೆ ಪರಿಶೀಲನೆ ನಡೆಸಿದ ಮಾಜಿ ಸಚಿವರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಂಪರ್ಕಿಸಿದರಲ್ಲದೆ ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರನ್ನೂ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ತಿಳಿಸಿ ಘಟನೆಗೆ ಕಾರಣ ತಿಳಿದುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಸೂಚನೆಯಂತೆ ತುರ್ತು ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ, ಮುಹಮ್ಮದ್ ನಂದಾವರ ಮೊದಲಾದವರು ಜೊತೆಗಿದ್ದರು.
0 comments:
Post a Comment