ಮೃತರ ಕುಟುಂಬಕ್ಕೆ ಈಗಾಗಲೇ ಪರಿಹಾರ ಹಸ್ತಾಂತರ : ಸಂತ್ರಸ್ತ ಯುವತಿಯ ಆಸ್ಪತ್ರೆ ವೆಚ್ಚ ಸರಕಾರವೇ ಭರಿಸಲಿದೆ
ಬಂಟ್ವಾಳ, ಜುಲೈ 08, 2023 (ಕರಾವಳಿ ಟೈಮ್ಸ್) : ಗುಡ್ಡ ಕುಸಿತದಿಂದಾಗಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಈಗಾಗಲೇ ಸರಕಾರದಿಂದ 6.20 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಸರಕಾರ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದು, ಗಾಯಾಳು ಯುವತಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಯವರ ವರದಿ ನೀಡಿದ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶನಿವಾರ ಸಂಜೆ ನಂದಾವರ-ಗುಂಪುಮನೆ ಎಂಬಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಮಾತನಾಡಿದ ಅವರು ಗುಡ್ಡ ಕುಸಿತ ಉಂಟಾಗಿ ಮಹಿಳೆ ಮೃತಪಟ್ಟ ಘಟನೆ ಅತ್ಯಂತ ವಿಷಾದನೀಯವಾಗಿದ್ದು, ಮುಂದಕ್ಕೆ ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ಮರುಕಳಿಸಬಾರದು. ಈ ಬಗ್ಗೆ ಸ್ಥಳೀಯ ಮಟ್ಟದ ಅಧಿಕಾರಿಗೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮಳೆ ಹಾಗೂ ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿ ಜನರ ಬೇಡಿಕೆ, ಕರೆಗಳನ್ನು ನಿರ್ಲಕ್ಷಿಸದೆ ಅಧಿಕಾರಿಗಳು ತಕ್ಷಣ ಸ್ಪಂದಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನಂದಾವರ ಪರಿಸರದಲ್ಲಿ ಉಂಟಾಗಿರುವ ಅನಾಹುತಕ್ಕೆ ಕಾರಣ ಕಂಡುಕೊಂಡು ಮುಂದಕ್ಕೆ ಇಂತಹ ಘಟನೆ ಮರುಕಳಿಸದಂತೆ ಶಾಶ್ವತ ಪರಿಹಾರ ಕ್ರಮವನ್ನು ಕೈಗೊಳ್ಳುವಂತೆ ಇದೇ ವೇಳೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಎನ್ ಡಿ ಆರ್ ಎಫ್ ಅಥವಾ ಎಸ್ ಡಿ ಆರ್ ಎಫ್ ಯೋಜನೆಗಳಲ್ಲಿ ಒಂದು ವೇಳೆ ಇಂತಹ ದೊಡ್ಡ ಕೆಲಸಕ್ಕೆ ಅವಕಾಶ ಇಲ್ಲದಿದ್ದಲ್ಲಿ ಯಾವುದೇ ಯೋಜನೆಯಡಿ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಜನರ ಪ್ರಾಣ, ಸೊತ್ತು ಹಾನಿಯಾಗದಂತೆ ಶಾಶ್ವತ ಪರಿಹಾರವನ್ನು ಕಾಲಹರಣ ಮಾಡದೆ ತಕ್ಷಣ ಕೈಗೊಳ್ಳಬೇಕು ಎಂದು ಗುಂಡೂರಾವ್ ಜಿಲ್ಲಾಧಿಕಾರಿಗೆ ತಾಕೀತು ಮಾಡಿದರು.
ಇದೇ ವೇಳೆ ಸ್ಥಳೀಯ ಬಡ ಮಹಿಳೆ ಜಲಜಾ ಎಂಬವರು ಉಸ್ತುವಾರಿ ಸಚಿವ ಗುಂಡೂರಾವ್ ಅವರನ್ನು ಭೇಟಿಯಾಗಿ ಸೂಕ್ತ ವಸತಿ ವ್ಯವಸ್ಥೆ ಮಾಡುವಂತೆ ವಿನಂತಿಸಿದರು. ಮಹಿಳೆಯ ಬೇಡಿಕೆಗೆ ಸ್ಪಂದಿಸಿದ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಜಿಲ್ಲಾಧಿಕಾರಿಗೆ ಸೂಚಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಬಂಟ್ವಾಳ ತಹಶೀಲ್ದಾರ್ ಎಸ್ ಬಿ ಕೂಡಲಗಿ, ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಟ್, ಪೊಲೀಸ್ ಇನ್ಸ್‍ಪೆಕ್ಟರ್ ವಿವೇಕಾನಂದ, ಸಜಿಪಮುನ್ನೂರು ಗ್ರಾ ಪಂ ಪಿಡಿಒ ಲಕ್ಷ್ಮಣ್, ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಸಜಿಪಮುನ್ನೂರು ಗ್ರಾ ಪಂ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಕೆಪಿಸಿಸಿ ಮುಖಂಡರಾದ ಅಶ್ವನಿ ಕುಮಾರ್ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಮೊದಲಾದವರು ಜೊತೆಗಿದ್ದರು.
0 comments:
Post a Comment