ಬಂಟ್ವಾಳ, ಜುಲೈ 07, 2023 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರ-ಗುಂಪುಮನೆಯಲ್ಲಿ ಶುಕ್ರವಾರ ಬೆಳಿಗ್ಗೆ ಮನೆ ಮೇಲೆ ಗುಡ್ಡ ಕುಸಿದು ಮಹಿಳೆ ಮೃತಪಟ್ಟ ಘಟನಾ ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸಂಜೆ ವೇಳೆ ಭೇಟಿ ನೀಡಿದ್ದು, ಮೃತಪಟ್ಟ ಝರೀನಾ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಹಾಗೂ ಮನೆ ದುರಸ್ತಿಗೆ 1.20 ಲಕ್ಷ ರೂಪಾಯಿ ತುರ್ತು ಪರಿಹಾರ ಘೋಷಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಭಾರೀ ಮಳೆಯಿಂದ ತತ್ತರಿಸಿರುವ ಕರಾವಳಿ ಜಿಲ್ಲೆಗಳಲ್ಲಿ ಅವಘಡ ನಡೆದ ಸ್ಥಳಗಳಿಗೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಹಾರ ನೀಡುವಂತೆ ಆದೇಶ ನೀಡಿದ ಹಿನ್ನಲೆಯಲ್ಲಿ ಡೀಸಿ ಮುಹಿಲನ್ ಅವರು ನಂದಾವರಕ್ಕೆ ಭೇಟಿ ನೀಡಿ ತಕ್ಷಣ ಪರಿಹಾರ ಘೋಷಿಸಿದ್ದಾರೆ.
ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಇಂತಹ ದುರಂತ ಘಟನೆಗಳು ನಡೆಯದಂತೆ ಸೂಕ್ತ ಮುನ್ನಚ್ಚರಿಕೆ ವಹಿಸುವಂತೆ ಡೀಸಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮಳೆ ಅನಾಹುತಗಳು ಸಂಭವಿಸುವ ಸನ್ನಿವೇಶಗಳೇನಾದರು ಕಂಡು ಬಂದಲ್ಲಿ ಅಂತಹ ಕುಟುಂಬಗಳು ಮಳೆ ಅಬ್ಬರ ಕಡಿಮೆ ಆಗುವವರೆಗೆ ಅಥವಾ ಪರ್ಯಾಯ ಕ್ರಮ ಪೂರ್ಣಗೊಳ್ಳುವವರೆಗೆ ಜಿಲ್ಲಾಡಳಿತ, ತಾಲೂಕಾಡಳಿತ ಸೂಚಿಸುವ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುವಂತೆ ಜನತೆಗೆ ಮನವಿ ಮಾಡಿದರು.
ಬಂಟ್ವಾಳ ತಹಶೀಲ್ದಾರ್ ಎಸ್ ಬಿ ಕೂಡಲಗಿ, ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸ್ಥಳೀಯ ಗ್ರಾ ಪಂ ಅಭಿವೃದ್ದಿ ಅಧಿಕಾರಿ ಲಕ್ಷ್ಮಣ್ ಸಹಿತ ಇಲಾಖಾಧಿಕಾರಿಗಳು ಜೊತೆಗಿದ್ದರು.
0 comments:
Post a Comment