ಗ್ಯಾರಂಟಿ ಯೋಜನೆಗಳಿಗೆ ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಣ : ಸಿಎಂ ಸಿದ್ದರಾಮಯ್ಯ - Karavali Times ಗ್ಯಾರಂಟಿ ಯೋಜನೆಗಳಿಗೆ ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಣ : ಸಿಎಂ ಸಿದ್ದರಾಮಯ್ಯ - Karavali Times

728x90

8 July 2023

ಗ್ಯಾರಂಟಿ ಯೋಜನೆಗಳಿಗೆ ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಣ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜುಲೈ 08, 2023 (ಕರಾವಳಿ ಟೈಮ್ಸ್) : ಗ್ಯಾರಂಟಿ ಯೋಜನೆಗಳಿಗೆ ಪ್ರಸಕ್ತ ಸಾಲಿಗೆ 35,410 ಕೋಟಿ ರೂಪಾಯಿ ಅಗತ್ಯವಿದ್ದು, ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು.

ಪೆಟ್ರೋಲ್-ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಮಾಡಿಲ್ಲ. ಬಡವರು-ಮಧ್ಯಮ ವರ್ಗದವರನ್ನು ಹೆಚ್ಚುವರಿ ತೆರಿಗೆ ಹೊರೆಯಿಂದ ಮುಕ್ತರಾಗಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಗ್ಯಾರಂಟಿ ಯೋಜನೆಗಳಿಗೆ 13,500 ಕೋಟಿ ರೂಪಾಯಿ ರಾಜಸ್ವ ಸಂಗ್ರಹ ಗುರಿ ಹೆಚ್ಚಳ ಹಾಗೂ 8000 ಕೋಟಿ ರೂಪಾಯಿ ಹೆಚ್ಚುವರಿ ಸಾಲದ ಮೂಲಕ ಮತ್ತು ಉಳಿದ ಸಂಪನ್ಮೂಲವನ್ನು ಯೋಜನೆಗಳ ಆದ್ಯತೆಯನ್ನು ನಿಗದಿಪಡಿಸುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕಾಗಿ ಬಡವರ-ಮಧ್ಯಮ ವರ್ಗದವರ ಮೇಲೆ ಯಾವುದೇ ತೆರಿಗೆ ಹಾಕಿಲ್ಲ, ಜನರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೇ ಪೆಟ್ರೋಲ್-ಡೀಸೆಲ್ ಮೇಲೆ ತೆರಿಗೆ ಹಾಕಲಿಲ್ಲ, ಬೆಲೆ ಏರಿಕೆ ಮಾಡಿಲ್ಲ ಎಂದಿದ್ದಾರೆ. 

ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ 3 ಮಾನದಂಡಗಳನ್ನು ಪಾಲಿಸಬೇಕಿದ್ದು, ಈ ಪೈಕಿ 2023-24 ರ ಬಜೆಟ್ ನಲ್ಲಿ 2 ಮಾನದಂಡಗಳನ್ನು ಕಾಯ್ದುಕೊಳ್ಳುವ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ವಿತ್ತೀಯ ಕೊರತೆ ಶೇ.3 ರಷ್ಟಿರಬೇಕು, ಸಾಲದ ಪ್ರಮಾಣ ಜಿಡಿಪಿಯ ಶೇ.25 %ರ ಒಳಗೆ ಇರಬೇಕು.  ಉಳಿತಾಯ ಬಜೆಟ್ ಇರಬೇಕು ಎನ್ನುವ ಮಾನದಂಡಗಳಿವೆ. ವಿತ್ತೀಯ ಕೊರತೆ ಶೇ. 2.6 ರಷ್ಟಿದ್ದು, ಸಾಲ ಜಿಡಿಪಿಯ ಶೇ. 22.3% ರಷ್ಟಿದೆ. ಹೀಗೆ 2 ಮಾನದಂಡಗಳನ್ನು ಪಾಲಿಸಿ ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲಾಗಿದೆ ಎಂದು ಸಿಎಂ ಹೇಳಿದರು. 

ಈ ಆಯವ್ಯಯಲ್ಲಿ 2,50,933 ಕೋಟಿ ರೂಪಾಯಿ ರಾಜಸ್ವ ವೆಚ್ಚ, ಬಂಡವಾಳ ವೆಚ್ಚ 54,374 ಕೋಟಿ ರೂಪಾಯಿಗಳಾಗಿದ್ದು, 2022-23ರ ಬಜೆಟ್ ಗೆ ಹೋಲಿಸಿದರೆ ಶೇ 23 ರಷ್ಟು ರಾಜಸ್ವ ವೆಚ್ಚ ಹಾಗೂ ಶೇ. 16 ರಷ್ಟು ಬಂಡವಾಳ ವೆಚ್ಚ ಹೆಚ್ಚಾಗುತ್ತದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ 2021-22ರಲ್ಲಿ ವಿತ್ತೀಯ ಕೊರತೆ 14,699 ಕೋಟಿ ರೂಪಾಯಿಗಳಷ್ಟಿತ್ತು. ನಮ್ಮ ಸರಕಾರದ ರಾಜಸ್ವ ಕೊರತೆ 12,523 ಕೋಟಿಯಷ್ಟಿದೆ, ವಿತ್ತೀಯ ಕೊರತೆ 66,646 ಕೋಟಿ ರೂಪಾಯಿ. ಇದು ಜಿಎಸ್ ಡಿಪಿಯ ಶೇ. 2.6 ರಷ್ಟಿದೆ. ರಾಜ್ಯದ ಹೊಣೆಗಾರಿಕೆ 5,71,665 ಕೋಟಿ ರೂಪಾಯಿಗಳಷ್ಟಿದ್ದು, ಇದು ಜಿಎಸ್ ಡಿಪಿ ಶೇ. 22.3 ರಷ್ಟಿದೆ. 2023-24ಕ್ಕೆ ರಾಜ್ಯವು ಪಡೆಯುವ ಸಾಲ 85,818 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ ಎಂದ ಸಿಎಂ ವಾಣಿಜ್ಯ ತೆರಿಗೆ ಫೆಬ್ರವರಿ ಆಯವ್ಯಯಕ್ಕಿಂತ 4,000 ಕೋಟಿ ರೂಪಾಯಿ ಹೆಚ್ಚುವರಿ ಗುರಿ ನಿಗದಿಪಡಿಸಲಾಗಿದೆ. ಅಬಕಾರಿ ಸುಂಕ ಗುರಿ 1,000 ಕೋಟಿ ರೂಪಾಯಿ ಹೆಚ್ಚಳ ಮಾಡಿದೆ. ಇದನ್ನು ಸೇರಿದಂತೆ ತೆರಿಗೆ ಸಂಗ್ರಹದ ಒಟ್ಟಾರೆ ಗುರಿಯನ್ನು 13,500 ಕೋಟಿ ರೂಪಾಯಿಗಳಷ್ಟು ಹೆಚ್ಚಳ ಮಾಡಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಗ್ಯಾರಂಟಿ ಯೋಜನೆಗಳಿಗೆ ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಣ : ಸಿಎಂ ಸಿದ್ದರಾಮಯ್ಯ Rating: 5 Reviewed By: karavali Times
Scroll to Top