ಬೆಂಗಳೂರು, ಜುಲೈ 17, 2023 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಜುಲೈ 17) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪಿ.ಟಿ.ಸಿ.ಎಲ್ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ ಸಭೆ ನಡೆಸಿ, ಚರ್ಚಿಸಿದರು.
ಈ ಸಂದರ್ಭ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ದಲಿತರ ಜಮೀನು ಹಕ್ಕು ಪರಭಾರೆ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ವಿಷಯದಲ್ಲಿ ಯಾವುದೇ ಬಹಿರಂಗ ಒತ್ತಡಕ್ಕೆ ಮಣಿಯುವುದಿಲ್ಲ. ಈ ವಿಚಾರದಲ್ಲಿ ನಮ್ಮ ಕಾಳಜಿಗಳ ಜತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಾರಿದರು.
ದಲಿತರ ಜಮೀನು ಹಕ್ಕು ಕಾಪಾಡುವ ನಿಟ್ಟಿನಲ್ಲಿ ಪಿ.ಟಿ.ಸಿ.ಎಲ್ ಕಾಯ್ದೆಗೆ ತಿದ್ದುಪಡಿ ಮಾಡುವ ಕುರಿತ ಸರ್ಕಾರದ ನಿಲುವನ್ನು ಆಯವ್ಯಯದಲ್ಲಿಯೂ ಸ್ಪಷ್ಟಪಡಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿಯೇ ಕಾಯ್ದೆ ತಿದ್ದುಪಡಿ ಮಾಡುವ ಉದ್ದೇಶದಿಂದ ಸಮುದಾಯದ ಮುಖಂಡರ ಅಭಿಪ್ರಾಯ ಪಡೆಯಲು ಇಂದು ಸಭೆ ಕರೆಯಲಾಗಿದೆ. ಮತ್ತೆ ಮತ್ತೆ ಯಾವುದೇ ವಿವಾದ ಇರಬಾರದು, ಪಿ.ಟಿ.ಸಿ.ಎಲ್ ಕಾಯ್ದೆಯ ಉದ್ದೇಶ ಪರಿಣಾಮಕಾರಿಯಾಗಿ ಈಡೇರಬೇಕು, ಭೂಮಿ ಕಳೆದುಕೊಂಡವರಿಗೆ ನ್ಯಾಯಾಲಯದಲ್ಲಿ ಹಿನ್ನಡೆ ಆಗಬಾರದು ಎನ್ನುವ ಉದ್ದೇಶದಿಂದ ಈ ಬಗ್ಗೆ ದಲಿತ ಮುಖಂಡರ ಮತ್ತು ನ್ಯಾಯವಾದಿಗಳ ಅಭಿಪ್ರಾಯ ಕೇಳಿದ್ದೇನೆ. ಕಾನೂನು ತಜ್ಞರ ಅಭಿಪ್ರಾಯವನ್ನೂ ಪಡೆದುಕೊಳ್ಳುತ್ತೇವೆ ಎಂದರು.
ನಾವು ಮೊದಲೇ ಕೊಟ್ಟಿದ್ದ ಭರವಸೆಯಂತೆ ಈ ಸರಕಾರದ ಮೊದಲನೆ ಅಧಿವೇಶನದಲ್ಲೇ ಪಿ.ಟಿ.ಸಿ.ಎಲ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದು ಇದೇ ವೇಳೆ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಸಚಿವರಾದ ಎಚ್ ಸಿ ಮಹದೇವಪ್ಪ, ಎಚ್ ಕೆ ಪಾಟೀಲ್, ಡಾ ಜಿ ಪರಮೇಶ್ವರ, ಕೆ ಎಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ನಾಗೇಂದ್ರ, ಕೆ ಎನ್ ರಾಜಣ್ಣ, ಆರ್ ಬಿ ತಿಮ್ಮಾಪುರ ಹಾಗೂ ಸರಕಾರದ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment