ಬಂಟ್ವಾಳ, ಜುಲೈ 24, 2023 (ಕರಾವಳಿ ಟೈಮ್ಸ್) : ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುರಿಂದ ಅವರ ಮನೋವಿಕಾಸವಾಗುವುದಲ್ಲದೆ ದೃಷ್ಟಿಕೋನಗಳು ವಿಶಾಲವಾಗುತ್ತವೆ. ಆದ್ದರಿಂದ ಮಕ್ಕಳು ಮೊಬೈಲ್ ಬಳಕೆಯಿಂದ ದೂರವಾಗಿ ಕಲೆ, ಸಾಹಿತ್ಯದಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಕೊಳ್ಳಬೇಕೆಂದು ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯ ಮಠ ಕರೆ ನೀಡಿದರು.
ಕಾಲೇಜಿನ ವಿವಿಧ ಶೈಕ್ಷಣಿಕ ಸಂಘಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಯೂಸುಫ್ ವಿಟ್ಲ ಮಾತನಾಡಿ, ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸಾಹಿತ್ಯ ಸಂಘ, ವಿಜ್ಞಾನ ಸಂಘ, ವಾಣಿಜ್ಯ ಸಂಘ, ರೆಡ್ ಕ್ರಾಸ್, ಇಕೋ ಕ್ಲಬ್, ರೆಡ್ ರಿಬ್ಬನ್ ಕ್ಲಬ್, ಮತ್ತು ಮತದಾರರ ಸಾಕ್ಷರತಾ ಕ್ಲಬ್ ಗಳು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಈ ಸಂಘಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದರು.
ಇದೇ ವೇಳೆ ಎನ್ ಎಸ್ ಎಸ್ ಘಟಕಕ್ಕೆ ನಾಯಕ ಮತ್ತು ನಾಯಕಿಯಾಗಿ ಆಯ್ಕೆಗೊಂಡ ದ್ವಿತೀಯ ಕಲಾ ವಿಭಾಗದ ಐಸಾಕ್ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ಮನೀಷಾ ಪಿ ಅಲ್ಲದೆ ವಿವಿಧ ಶೈಕ್ಷಣಿಕ ಸಂಘಗಳ ಕಾರ್ಯದರ್ಶಿಗಳಾಗಿ ನೇಮಕಗೊಂಡ ಶ್ರಾವಣಿ, ಶಾಹಿದ ರೆಹಮಾನ್, ಶಾಲೆಟ್ ಪ್ರೀಮಾ ಸುವಾರಿಸ್, ಚರಣ್, ಅನ್ಸಿಫಾ ಬಾನು, ದೀಪಾ, ಮಹಮ್ಮದ್ ಆಸಿಫ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುಷ್ಮಾ ಚರಣ್, ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಭರತರಾಜ್, ಹರೀಶ್ ಪೂಜಾರಿ, ಯಶೋಧ ಮೊದಲಾದವರು ಭಾಗವಹಿಸಿದ್ದರು. ಉಪನ್ಯಾಸಕರಾದ ಲವೀನ ಶಾಂತಿ ಲೋಬೊ, ದಿವ್ಯಾ, ಹರ್ಷಿತ, ಶಮಿತಾ, ಪ್ರತಿಭಾ, ಸವಿತಾ, ಸೂರಜ್ ಬಿ ಎಸ್ ಸಹಕರಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ್ ಕೆ ಬೆಳ್ಳಾರೆ ಸ್ವಾಗತಿಸಿ, ಲಕ್ಷ್ಮೀ ಆಚಾರ್ಯ ವಂದಿಸಿದರು. ಉಪನ್ಯಾಸಕ ದಾಮೋದರ ಇ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment