ಬಂಟ್ವಾಳ, ಜುಲೈ 22, 2023 (ಕರಾವಳಿ ಟೈಮ್ಸ್) : ವಾರದ ಬಿಡುವಿನ ಬಳಿಕ ಬಂಟ್ವಾಳ ತಾಲೂಕಿನಲ್ಲಿ ಮತ್ತೆ ಮಳೆ ಬಿರುಸು ಪಡೆದುಕೊಂಡಿದ್ದು, ತಾಲೂಕಿನ ಜೀವ ನದಿ ನೇತ್ರಾವತಿಯಲ್ಲಿ ನೀರಿನ ಹರಿವು ಕೂಡಾ ಶನಿವಾರ ದಿಢೀರ್ ಏರಿಕೆ ಕಂಡು ಬಂದಿದೆ. ಶುಕ್ರವಾರದವರೆಗೂ ಕೇವಲ 2 ಮೀಟರ್ ಅಂತರದಲ್ಲಿ ಹರಿಯುತ್ತಿದ್ದ ನೇತ್ರಾವತಿ ಶನಿವಾರ ಬೆಳಿಗ್ಗೆ 5.5ರಲ್ಲಿ ಹರಿಯುತ್ತಿದೆ.
ಶುಕ್ರವಾರ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ವಿವಿಧೆಡೆ ಮಳೆ ಹಾನಿ ಪ್ರಕರಣಗಳೂ ವರದಿಯಾಗಿವೆ. ನರಿಕೊಂಬು ಗ್ರಾಮದ ನಿವಾಸಿ ಶಾರದಾ ಬಿನ್ ನೀಲಪ್ಪ ಅವರ ಮನೆಯ ಮೇಲೆ ಮರ ಬಿದ್ದು ಆಂಶಿಕ ಹಾನಿಯಾಗಿದೆ. ವೀರಕಂಭ ಗ್ರಾಮದ ಮಜ್ಜೋನಿ ನಿವಾಸಿ ಭಾಗಿ ಅವರ ಕಚ್ಚಾ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಕರಿಯಂಗಳ ಗ್ರಾಮದ ನಿವಾಸಿ ಮಾರಿಯಮ್ಮ ಅವರ ಮನೆಯ ಮೇಲ್ಚಾವಣಿ ಕುಸಿದು ಭಾಗಶಃ ಹಾನಿಯಾಗಿದೆ.
ಅಮ್ಮುಂಜೆ ಗ್ರಾಮದ ನಿವಾಸಿ ಕೊರಗಪ್ಪ ಅವರ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ನರಿಕೊಂಬು ಗ್ರಾಮದ ಕರ್ಬೆಟ್ಟು ನಿವಾಸಿ ಬಾಬು ಬಿನ್ ಬುಡಂಗ ಪೂಜಾರಿ ಅವರ ಮನೆಯ ಮೇಲೆ ಮರ ಬಿದ್ದು ಆಂಶಿಕ ಹಾನಿಯಾಗಿದೆ. ಕಳ್ಳಿಗೆ ಗ್ರಾಮದ ನಿವಾಸಿ ದಿವಾಕರ್ ಅವರ ಅಡಿಕೆ ಮರ ತುಂಡಾಗಿ ಬಿದ್ದಿರುತ್ತದೆ. ಈ ಬಗ್ಗೆ ತೋಟಗಾರಿಕಾ ಇಲಾಖೆಗೆ ಮಾಹಿತಿ ನೀಡಲಾಗಿದೆ. ಚೆನ್ನೈತ್ತೋಡಿ ಗ್ರಾಮದ ಕರಿಮಲೆ ನಿವಾಸಿ ಶಿವರಾಮ ನಾಯಕ್ ಅವರ ಅಡಿಕೆ ತೋಟಕ್ಕೆ ಹಾನಿಯಾಗಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ನೇರಳಕಟ್ಟೆ ಎಂಬಲ್ಲಿ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾದ ಘಟನೆಯೂ ವರದಿಯಾಗಿದೆ. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಜೊತೆಗೂಡಿ ರಸ್ತೆಗೆ ಬಿದ್ದ ಮರ ತೆರವು ಕಾರ್ಯ ನಡೆಸಿದ್ದಾರೆ.
ನೆಟ್ಲಮುಡ್ನೂರು ಗ್ರಾಮದ ಏಮಾಜೆ ನಿವಾಸಿ ಹೊನ್ನಮ್ಮ ಕೋಂ ಬಾಬು ಗೌಡ ಅವರ ವಾಸ್ತವ್ಯದ ಮನೆಯಿಂದ ಪ್ರತ್ಯೇಕವಾಗಿ ಇರುವ ಕೊಟ್ಟಿಗೆ ಹಾನಿಯಾಗಿದೆ. ವಿಟ್ಲ ಹೋಬಳಿಯ ವಿಟ್ಲ ಮುಡ್ನೂರು ಗ್ರಾಮದ ಮೂಡಾಯಿಮಾರು ನಿವಾಸಿ ಸತೀಶ್ ಶೆಟ್ಟಿ ಬಿನ್ ದಿವಂಗತ ನಾರಾಯಣ ಶೆಟ್ಟಿ ಅವರ ಕೊಟ್ಟಿಗೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಅಳಿಕೆ-ಕಾನತ್ತಡ್ಕ ನಿವಾಸಿ ರಝಾಕ್ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಪುದು ಗ್ರಾಮದ ಸುಜೀರು-ಬದಿಗುಡ್ಡೆ ನಿವಾಸಿ ಅಬೂಬ್ಕರ್ ಸಿದ್ದೀಕ್ ಬಿನ್ ಹಮೀದ್ ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಮನೆ ಮಂದಿಯನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಬಡಗ ಬೆಳ್ಳೂರು ಗ್ರಾಮದ ಬಾಳಿಕೆ ನಿವಾಸಿ ವಾಮದೇವ ಅವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿ ಅಪ್ಪಿ ಮೂಲ್ಯ ಇವರ ಮನೆಗೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ ಎಂದು ಬಂಟ್ವಾಳ ತಾಲೂಕು ಕಚೇರಿಯ ಮಾಹಿತಿ ತಿಳಿಸಿದೆ.
0 comments:
Post a Comment