ಬಂಟ್ವಾಳ, ಜುಲೈ 24, 2023 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಎಡೆ ಬಿಡದೆ ಮಳೆ ಬಿರುಸಿನಿಂದ ಸುರಿಯುತ್ತಿದ್ದು, ಪರಿಣಾಮವಾಗಿ ಇಲ್ಲಿನ ಜೀವನದಿ ನೇತ್ರಾವತಿ ಅಪಾಯದ ಮಟ್ಟದ ಸನಿಹದಲ್ಲಿ ಹರಿಯುತ್ತಿದೆ. ಭಾನುವಾರ ರಾತ್ರಿ ವೇಳೆ ನೇತ್ರಾವತಿ ನದಿ ನೀರಿನ ಮಟ್ಟ 8 ಮೀಟರ್ ತಲುಪಿದ್ದು, ಸಹಜವಾಗಿ ಬಂಟ್ವಾಳದಲ್ಲಿ 8.5 ಮೀಟರ್ ನೇತ್ರಾವತಿ ತಲುಪಿದರೆ ಅಪಾಯದ ಮಟ್ಟ ಮೀರಿದೆ ಎಂದು ತಾಲೂಕಾಡಳಿತ ಘೋಷಿಸುತ್ತಿದೆ. ಭಾನುವಾರ ರಾತ್ರಿಯೂ ಮಳೆ ಮುಂದುವರಿದಿರುವುದರಿಂದ ನೀರಿನ ಮಟ್ಟ ಇನ್ನೂ ಕೂಡಾ ಏರಿಕೆಯಾಗುವ ಸಾಧ್ಯತೆ ಇರುವ ಬಗ್ಗೆ ತಾಲೂಕಾಡಳಿತ ಎಚ್ಚರಿಸಿದ್ದು, ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. ಅಲ್ಲದೆ ಪ್ರವಾಹಪೀಡಿತರಾಗುವ ಮಂದಿಯ ಸುರಕ್ಷತೆಗಾಗಿ ಕಾಳಜಿ ಕೇಂದ್ರಗಳನ್ನೂ ಕೂಡಾ ತಾಲೂಕಾಡಳಿತ ವತಿಯಿಂದ ತೆರೆಯಲಾಗಿದ್ದು, ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಡೀ ದಿನ ಕೇಂದ್ರ ಸ್ಥಾನದಲ್ಲಿದ್ದು ಜನರ ಸುರಕ್ಷತೆ ಕಡೆಗೆ ಗಮನ ಹರಿಸಿದ್ದಾರೆ.
ತಾಲೂಕಿನ ನೆರೆ ಪೀಡಿತ ಪ್ರದೇಶಗಳು ಎಂದು ಗುರುತಿಸಲಾಗಿರುವ ಪಾಣೆಮಂಗಳೂರು ಆಲಡ್ಕ ಪಡ್ಪು, ಬಿ ಮೂಡ ಗ್ರಾಮದ ಬಸ್ತಿಪಡ್ಪು, ನಾವೂರು ಗ್ರಾಮದ ಮಣಿಹಳ್ಳ, ಮೈಂದಾಳ ಸಹಿತ ಇನ್ನಿತರ ಪ್ರದೇಶಗಳಿಗೆ ಭಾನುವಾರ ಮಂಗಳೂರು ಸಹಾಯಕ ಆಯುಕ್ತ ಡಾ ಹರ್ಷವರ್ಧನ, ತಾಲೂಕು ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ನದಿ ನೀರಿನ ಮಟ್ಟ ಪರಿಶೀಲನೆ ನಡೆಸಿದ್ದಾರೆ. ನದಿ ತೀರದ ಜನರಿಗೆ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರಲ್ಲದೆ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ಉಪತಹಸೀಲ್ದಾರ್ ರಾಜೇಶ್ ನಾಯ್ಕ್, ಕಂದಾಯ ನಿರೀಕ್ಷಕ ವಿಜಯ್ ಆರ್, ಗ್ರಾಮ ಆಡಳಿತ ಆಧಿಕಾರಿ ಮತ್ತಿಹಳ್ಳಿ ಪ್ರಕಾಶ್, ಅಶ್ವಿನಿ, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಯಶೋಧ, ಶಿವಪ್ರಸಾದ್, ಸಂದೇಶ್ ಜೊತೆಗಿದ್ದರು.
0 comments:
Post a Comment