ಪತ್ರಿಕಾ ವರದಿ ಬಳಿಕ ರೆಂಗೇಲಿಗೆ ಬಂತು ಟ್ಯಾಂಕರ್ ನೀರು : ಅರ್ಧಂಬರ್ದ ನೀರು ಒದಗಿಸಿದ ವ್ಯವಸ್ಥೆಗೆ ಮತ್ತೆ ಪುರವಾಸಿಗಳ ಆಕ್ರೋಶ, ಶಾಸಕರ ಸಭೆ ನಡೆದು ವಾರ ಕಳೆಯುವಷ್ಟಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕರ ಮಧ್ಯಪ್ರವೇಶಕ್ಕೆ ಆಗ್ರಹ - Karavali Times ಪತ್ರಿಕಾ ವರದಿ ಬಳಿಕ ರೆಂಗೇಲಿಗೆ ಬಂತು ಟ್ಯಾಂಕರ್ ನೀರು : ಅರ್ಧಂಬರ್ದ ನೀರು ಒದಗಿಸಿದ ವ್ಯವಸ್ಥೆಗೆ ಮತ್ತೆ ಪುರವಾಸಿಗಳ ಆಕ್ರೋಶ, ಶಾಸಕರ ಸಭೆ ನಡೆದು ವಾರ ಕಳೆಯುವಷ್ಟಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕರ ಮಧ್ಯಪ್ರವೇಶಕ್ಕೆ ಆಗ್ರಹ - Karavali Times

728x90

5 June 2023

ಪತ್ರಿಕಾ ವರದಿ ಬಳಿಕ ರೆಂಗೇಲಿಗೆ ಬಂತು ಟ್ಯಾಂಕರ್ ನೀರು : ಅರ್ಧಂಬರ್ದ ನೀರು ಒದಗಿಸಿದ ವ್ಯವಸ್ಥೆಗೆ ಮತ್ತೆ ಪುರವಾಸಿಗಳ ಆಕ್ರೋಶ, ಶಾಸಕರ ಸಭೆ ನಡೆದು ವಾರ ಕಳೆಯುವಷ್ಟಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕರ ಮಧ್ಯಪ್ರವೇಶಕ್ಕೆ ಆಗ್ರಹ

ಬಂಟ್ವಾಳ, ಜೂನ್ 05, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವಾರ್ಡ್ ಸಂಖ್ಯೆ 26ರ ರೆಂಗೇಲು ಪ್ರದೇಶಗಳಿಗೆ ಕಳೆದ ಕೆಲ ದಿನಗಳಿಂದ ಸಂಪೂರ್ಣವಾಗಿ ಕುಡಿಯುವ ನೀರಿನ ಸರಬರಾಜು ಇಲ್ಲದೆ ಜನಾಕ್ರೋಶ ವ್ಯಕ್ತವಾಗಿರುವ ಬಗ್ಗೆ ಭಾನುವಾರ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಪುರಸಭಾಡಳಿತ ಈ ಪರಿಸರಕ್ಕೆ ಅರ್ಧಂಬರ್ದ ಟ್ಯಾಂಕರ್ ನೀರು ಸರಬರಾಜು ಮಾಡಿ ಕಣ್ಣಿಗೆ ಮಣ್ಣೆರಚಿದೆ ಎಂದು ಸ್ಥಳೀಯರು ಮತ್ತೆ ಆಕ್ರೋಶಿತರಾಗಿದ್ದಾರೆ. 

ತೀವ್ರ ನೀರಿನ ಸಮಸ್ಯೆಯಿಂದ ಬಳಲಿದ್ದ ಇಲ್ಲಿನ ನಿವಾಸಿಗಳು ಪುರಸಭಾ ಕಚೇರಿಗೆ ಹಾಗೂ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕುತ್ತಾರೆ ಎಂಬ ಮಾಹಿತಿ ಲಭಿಸಿದ ಹಿನ್ನಲೆಯಲ್ಲಿ ಸೋಮವಾರ ಸಂಜೆ ತರಾತುರಿಯಲ್ಲಿ ಒಂದೆರಡು ಟ್ಯಾಂಕರ್ ನೀರನ್ನು ಪೂರೈಸಿತ್ತು. ಇದು ಕೆಲವು ಮನೆಗಳಿಗೆ ಲಭಿಸಿದರೆ, ಇನ್ನು ಕೆಲ ಮನೆಗಳಿಗೆ ನೀರು ದೊರೆತಿಲ್ಲ. ಈ ಬಗ್ಗೆ ಟ್ಯಾಂಕರ್ ಚಾಲಕ-ನಿರ್ವಾಹಕರಲ್ಲಿ ಪ್ರಶ್ನಿಸಿದರೆ ಅವರು ಸ್ಥಳೀಯ ನಾಗರಿಕರೊಂದಿಗೆ ಉಡಾಫೆ ಹಾಗೂ ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಇದೊಂದು ಟ್ಯಾಂಕರ್ ವಾಟರ್ ಮಾಫಿಯಾ ಎಂದು ಜನ ಆರೋಪಿಸಿದ್ದಾರೆ. 

ರೆಂಗೇಲು ಪರಿಸರವಾಸಿಗಳು ಇಂತಹ ಹಲವಾರು ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹಲವು ಸಮಯಗಳಿಂದ ಎದುರಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಪುರಸಭಾ ಉಪಾಧ್ಯಕ್ಷೆ ಸಹಿತ ಆಡಳಿತ ಪಕ್ಷದ ಮೂರು ಮಂದಿ ಕೌನ್ಸಿಲರ್ ಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಇಲ್ಲದೆ ತೀರಾ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಲ್ಲದೆ ಈ ಭಾಗದ ಕೌನ್ಸಿಲರ್ ಗಳು ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹೊತ್ತಿನಲ್ಲಿ ಸರಕಾರದ ಹುದ್ದೆಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಇತ್ತ ಕ್ಷೇತ್ರದ ಶಾಸಕರೂ ಕೂಡಾ ಇಲ್ಲಿನ ಸಮಸ್ಯೆಗೆ ಯಾವುದೇ ಸ್ಪಂದನೆ ತೋರುತ್ತಿಲ್ಲ ಎಂದೂ ಕೂಡಾ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗಷ್ಟೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಮಳೆ ಬರುವವರೆಗೆ ಟ್ಯಾಂಕರ್ ಬಳಸಿಯಾದರೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದ್ದರು. ಶಾಸಕರು ಸಭೆ ನಡೆಸಿ ಒಂದು ವಾರವೂ ಕಳೆದಿಲ್ಲ. ಅಷ್ಟರಲ್ಲೇ ಪುರಸಭಾ ವ್ಯಾಪ್ತಿಯಲ್ಲೇ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದೆ ಮಾತ್ರವಲ್ಲ ಸಮಸ್ಯೆ ಮಿತಿ ಮೀರಿ ಹೋಗಿದೆ. ತಕ್ಷಣ ಶಾಸಕರು ಈ ಬಗ್ಗೆ ಮಧ್ಯ ಪ್ರವೇಶಿಸಿ ರೆಂಗೇಲು ಪರಿಸರವಾಸಿಗಳ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕು ಹಾಗೂ ಇಲ್ಲಿನ ಟ್ಯಾಂಕರ್ ಮಾಫಿಯಾ 40 ಪರ್ಸೆಂಟೇಜ್ ಬಗ್ಗೆ ತುರ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪತ್ರಿಕಾ ವರದಿ ಬಳಿಕ ರೆಂಗೇಲಿಗೆ ಬಂತು ಟ್ಯಾಂಕರ್ ನೀರು : ಅರ್ಧಂಬರ್ದ ನೀರು ಒದಗಿಸಿದ ವ್ಯವಸ್ಥೆಗೆ ಮತ್ತೆ ಪುರವಾಸಿಗಳ ಆಕ್ರೋಶ, ಶಾಸಕರ ಸಭೆ ನಡೆದು ವಾರ ಕಳೆಯುವಷ್ಟಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕರ ಮಧ್ಯಪ್ರವೇಶಕ್ಕೆ ಆಗ್ರಹ Rating: 5 Reviewed By: karavali Times
Scroll to Top