ಮಂಗಳೂರು, ಜೂನ್ 13, 2023 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ನಿರ್ವಹಣಾ ವಾಹನವೊಂದು ಮಂಗಳವಾರ ಬೆಳಿಗ್ಗೆಯಿಂದಲೇ ನಗರದ ರಾಜರಸ್ತೆಯಲ್ಲಿ ಬೀಡು ಬಿಟ್ಟಿದ್ದು, ಪರಿಸರವಿಡೀ ದುರ್ನಾತ ಬೀರುತ್ತಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಬೆಳಿಗ್ಗೆಯಿಂದಲೇ ಈ ಪರಿಸರದಲ್ಲಿ ಮೂಗು ಮುಚ್ಚಿ ಓಡಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ನಗರದ ಪುರಭವನದ ಎದುರುಗಡೆ ರಸ್ತೆಯಲ್ಲಿ ತಾಸುಗಟ್ಟಲೆ ತ್ಯಾಜ್ಯ ನಿರ್ವಹಣಾ ವಾಹನ ಬೀಡುಬಿಟ್ಟು ಜನ ತೀವ್ರ ತೊಂದರೆ ಅನುಭವಿಸುತ್ತಿದ್ದರೂ ಮನಪಾ ಆರೋಗ್ಯಾಧಿಕಾರಿಗಳು ವಿಲೇವಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಾ ದುರ್ನಾತದ ಮಧ್ಯದಲ್ಲೇ ಕಾಲ ಕಳೆಯುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಪುರಸಭವನ, ಉದ್ಯಾನವನ, ಎದುರುಭಾಗದಲ್ಲಿ ಆರ್ ಟಿ ಕಚೇರಿ ಸಹಿತ ವಿವಿಧ ಸರಕಾರಿ ಇಲಾಖಾ ಕಚೇರಿಗಳಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುವ ಪ್ರದೇಶವಾಗಿದ್ದು, ಈ ಪರಿಸರದ ರಾಜ ರಸ್ತೆಯಲ್ಲಿ ತ್ಯಾಜ್ಯ ವಿಲೇ ವಾಹನ ಬಾಕಿಯಾಗಿದೆ. ವಾಹನದ ಚಾಲಕ ನಿಲ್ಲಿಸಿ ಹೋಗಿದ್ದಾನೋ ಅಥವಾ ವಾಹನ ಕೆಟ್ಟುಹೋಗಿದ್ದಕ್ಕಾಗಿ ನಿಲ್ಲಿಸಲಾಗಿದೆಯೋ ಎಂಬುದು ಗೊತ್ತಾಗುತ್ತಿಲ್ಲ ಎನ್ನುವ ಸಾರ್ವಜನಿಕರು ಏನಿದ್ದರೂ ಮನಪಾ ಅಧಿಕಾರಿಗಳು ಇಂತಹ ಗಲೀಜು ಪರಿಸ್ಥಿತಿಗೆ ತಕ್ಷಣ ಸ್ಪಂದಿಸಬೇಕಾಗಿತ್ತು. ಆದರೆ ಮನಪಾ ಅಧಿಕಾರಿಗಳು ಗಾಢ ನಿದ್ದೆಯಲ್ಲಿದ್ದಾರೋ ಎನ್ನುವಂತೆ ಈ ತ್ಯಾಜ್ಯ ನಿರ್ವಹಣಾ ವಾಹನ ತಾಸುಗಟ್ಟಲೆ ರಸ್ತೆಯಲ್ಲಿ ಬೀಡು ಬಿಟ್ಟಿರುವ ಪರಿಣಾಮ ಅದರಿಂದ ತ್ಯಾಜ್ಯ ಮಿಶ್ರಿತ ದುರ್ನಾತ ಬೀರುತ್ತಿರುವ ಕಲುಷಿತ ನೀರು ನಿರಂತರವಾಗಿ ರಸ್ತೆಗೆ ಇಳಿದು ಬರುತ್ತಿದೆ. ಇದರಿಂದ ಪರಿಸರ ಇಡೀ ದುರ್ನಾತ ಬೀರುತ್ತಿದೆ. ಮಳೆ ಬಂದರೆ ತ್ಯಾಜ್ಯ ನೀರು ಮಳೆ ನೀರಿನಿಂದ ಸೇರಿಕೊಂಡು ನಗರವಿಡೀ ಹರಿಯುವ ಸಾಧ್ಯತೆ ಇದ್ದು, ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
0 comments:
Post a Comment