ಬೆಂಗಳೂರು, ಜೂನ್ 22, 2023 (ಕರಾವಳಿ ಟೈಮ್ಸ್) : ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸುವ ಬಗ್ಗೆ ಶಿಕ್ಷಣ ಇಲಾಖೆ ಬುಧವಾರ ಮಹತ್ವದ ಆದೇಶ ಹೊರಡಿಸಿದೆ. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕವನ್ನು ಶಿಕ್ಷಣ ಇಲಾಖೆ ನಿಗದಿ ಮಾಡಿ ಆದೇಶಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಸಂಬಂಧ ಮಹತ್ವದ ಆದೇಶ ಹೊರಡಿಸಿದ್ದಾರೆ.
ಇಲಾಖೆಯ ಈ ಹೊಸ ನಿಯಮ ಸರಕಾರಿ, ಅನುದಾನಿತ ಹಾಗೂ ಎಲ್ಲಾ ಖಾಸಗಿ ಶಾಲೆಗಳಿಗೂ ಅನ್ವಯಿಸಲಿದೆ. ಎಲ್ಲಾ ಶಾಲೆಗಳು ಕಡ್ಡಾಯವಾಗಿ ಈ ನಿಯಮ ಪಾಲನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಂತೆ 1 ರಿಂದ 2ನೇ ತರಗತಿಯ ಮಕ್ಕಳಿಗೆ 1.5 ರಿಂದ 2 ಕೆ.ಜಿ, 3 ರಿಂದ 5ನೇ ತರಗತಿ 2 ರಿಂದ 3 ಕೆ.ಜಿ, 6 ರಿಂದ 8ನೇ ತರಗತಿ 3 ರಿಂದ 4 ಕೆ.ಜಿ ಹಾಗೂ 9 ರಿಂದ 10ನೇ ತರಗತಿಯ ಮಕ್ಕಳಿಗೆ 4 ರಿಂದ 5 ಕೆ.ಜಿ. ವರೆಗೆ ಶಾಲಾ ಬ್ಯಾಗ್ ತೂಕ ನಿಗದಿ ಮಾಡಲಾಗಿದೆ.
ಶಾಲಾ ಶಿಕ್ಷಕರು ಅಗತ್ಯಕ್ಕೆ ತಕ್ಕಂತೆ ಅಂದಿನ ಪಠ್ಯಪುಸ್ತಕ ಹಾಗೂ ಇತರೆ ಕಲಿಕಾ ಸಾಮಗ್ರಿಗಳನ್ನು ಮಾತ್ರ ತರುವಂತೆ ನೋಡಿಕೊಳ್ಳಬೇಕು. 200 ಪುಟ ಮೀರದ ನೊಟ್‍ಬುಕ್ ಬಳಸಲು ಸೂಚಿಸಬೇಕು. ಶಾಲೆಗಳಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಬ್ಯಾಗ್ ಹೊರೆಯಿಂದ ಆಗುವ ದುಷ್ಪರಿಣಾಮಗಳನ್ನು ಪೆÇೀಷಕರಿಗೆ ಮನವರಿಕೆ ಮಾಡಿಕೊಡಬೇಕು. ನಿಯಮ ಉಲ್ಲಂಘಿಸುವ ಶಿಕ್ಷಕರು, ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಹೊರಡಿಸಿದ ಆದೇಶದಲ್ಲಿ ಎಚ್ಚರಿಸಿದೆ.
0 comments:
Post a Comment