ಬಂಟ್ವಾಳ, ಜೂನ್ 03, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವಾರ್ಡ್ ಸಂಖ್ಯೆ 26ರ ರೆಂಗೇಲು ಪ್ರದೇಶಗಳಿಗೆ ಕಳೆದ ನಾಲ್ಕೈದು ದಿನಗಳಿಂದ ಸಂಪೂರ್ಣವಾಗಿ ಕುಡಿಯುವ ನೀರಿನ ಸರಬರಾಜು ಇಲ್ಲದೆ ಜನಾಕ್ರೋಶ ವ್ಯಕ್ತವಾಗಿದೆ. ಈ ಪ್ರದೇಶದಲ್ಲಿ ಪ್ರತಿ ವರ್ಷವೂ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿದ್ದು, ಪರಿಹಾರದ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಇಲ್ಲಿನ ಚುನಾಯಿತ ಜನಪ್ರತಿನಿಧಿಗಳಿಂದಾಗಲೀ, ಚುನಾವಣಾ ಸಂದರ್ಭ ವಿವಿಧ ಭರವಸೆ ನೀಡಿ ಬರುವ ಜವಾಬ್ದಾರಿಯುತ ರಾಜಕೀಯ ಪಕ್ಷಗಳ ನಾಯಕರಿಂದಾಗಲೀ, ಪುರಸಭಾಧಿಕಾರಿಗಳಿಂದಾಗಲೀ, ಬೇಸಿಗೆಯಲ್ಲಿ ವಿಶೇಷವಾಗಿ ಕುಡಿಯುವ ನೀರನ್ನು ಜನರಿಗೆ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾದ ತಾಲೂಕಾಡಳಿತ, ಜಿಲ್ಲಾಡಳಿತಗಳಿಂದ ನಡೆಯುತ್ತಿಲ್ಲ ಎಂಬುದೇ ವಿಪರ್ಯಾಸ.
ಈ ಪ್ರದೇಶ ಗ್ರಾಮೀಣ ಪ್ರದೇಶವಾಗಿರದೆ, ಬಂಟ್ವಾಳ ಪುರಸಭೆಯ ವ್ಯಾಪ್ತಿಗೆ ಬರುವ ಪಟ್ಟಣ ಪ್ರದೇಶವಾಗಿದ್ದು, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮೆಲ್ಕಾರ್ ಜಂಕ್ಷನ್ನಿನ ಅನತಿ ದೂರದಲ್ಲಿರುವ ಈ ಪ್ರದೇಶದ ಜನರಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನೇ ಒದಗಿಸಿಕೊಡಲು ಸಾಧ್ಯವಾಗದಿರುವುದೇ ಇಲ್ಲಿನ ಪುರಸಭೆಗೆ ಇಲ್ಲಿನ ಜನರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ಹಾಗೂ ಪುರಸಭಾಧಿಕಾರಿಗಳ ಜವಾಬ್ದಾರಿಯನ್ನೇ ಪ್ರಶ್ನಿಸುವಂತಾಗಿದೆ. ಕಳೆದ ಚುನಾವಣಾ ಸಂದರ್ಭದಲ್ಲಿ ನಿರಂತರ 2 ತಿಂಗಳು ನೀರೇ ಬರದಿದ್ದರೂ ಕೇವಲ ಒಂದು ವಾರದ ಅವಧಿಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಿ, ಇಲ್ಲಿನ ಜನರನ್ನು ವಿವಿಧ ಆಮಿಷ, ಭರವಸೆಗಳನ್ನು ನೀಡಿ ಮತ ಯಾಚನೆ ನಡೆಸಿ ತೆರಳಿದವರು ಇದೀಗ ಬಿರು ಬೇಸಿಗೆಯಲ್ಲಿ ಉಂಟಾಗಿರುವ ಕುಡಿಯುವ ನೀರು ಸಮಸ್ಯೆ ಬಗ್ಗೆ ತಿರುಗಿಯೂ ನೋಡುತ್ತಿಲ್ಲ ಎಂದು ವಾರ್ಡ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ ಪುರಸಭಾ ಉಪಾಧ್ಯಕ್ಷೆ ಸಹಿತ ಮೂರು ಮಂದಿ ಆಡಳಿತ ಪಕ್ಷದ ಕೌನ್ಸಿಲರ್ ಗಳಿದ್ದರೂ ಈ ಭಾಗದ ಕನಿಷ್ಠ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಸಾಧ್ಯವಾಗದೆ ಜನರ ಪ್ರಶ್ನೆಗಳಿಗೆ ಉಡಾಫೆ ಹಾಗೂ ಬೇಜವಾಬ್ದಾರಿಯಾಗಿ ವರ್ತಿಸುತ್ತಿರುವುದು ಇಲ್ಲಿನ ನಿವಾಸಿಗಳನ್ನು ಇನ್ನಷ್ಟು ಆಕ್ರೋಶಿತರಾಗುವಂತೆ ಮಾಡಿದೆ. ಜನಪ್ರತಿನಿಧಿಗಳ ಹಾಗೂ ಪುರಸಭಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಕಾರಣದಿಂದ ಇಲ್ಲಿನ ನಿವಾಸಿಗಳು ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಮನೆ ಬಿಟ್ಟು ತೆರಳಬೇಕಾದ ಪರಿಸ್ಥಿತಿ ಬಂದಿದ್ದು, ಈ ಕಾರಣಕ್ಕಾಗಿ ಎಲ್ಲಿಗಾದರೂ ಸ್ವಂತ ನೀರಿನ ಮೂಲ ಇರುವ ಸಂಬಂಧಿಕರ ಮನೆಗಾದರೂ ತೆರಳುವ ಎಂದುಕೊಂಡರೆ ಪ್ರತಿ ಕಡೆಯಲ್ಲೂ ನೀರಿನ ಸಮಸ್ಯೆ ಕಾಡುತ್ತಿದ್ದು, ಬಾವಿ, ಕೊಳವೆ ಬಾವಿ ಇದ್ದರೂ ಅದರಲ್ಲೂ ನೀರಿನ ಪ್ರಮಾಣ ಕಡಿಮೆ ಇದ್ದು, ಒಂದು ಮನೆಯವರಿಗೇ ಅದು ಸಾಕಾಗದ ಸನ್ನಿವೇಶ ಇರುವುದರಿಂದ ಆ ರೀತಿಯ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಇನ್ನೂ ಕೂಡಾ ಮಳೆಗಾಲ ಆರಂಭವಾಗದೆ ಕುಡಿಯುವ ನೀರಿನ ಅಭಾವ ಮಿತಿ ಮೀರುತ್ತಿದ್ದು, ರೆಂಗೇಲು ಪರಿಸರದ ನೀರಿನ ಸಮಸ್ಯೆಗೆ ತಕ್ಷಣ ತುರ್ತಾಗಿ ಪರಿಹಾರ ಒದಗಿಸಿಕೊಡದಿದ್ದಲ್ಲಿ ಪುರಸಭೆ ಹಾಗೂ ಜಿಲ್ಲಾಡಳಿತ ಕಚೇರಿಯ ಮುಂಭಾಗ ಧರಣಿ ಕೂರುವುದಾಗಿ ಪರಿಸರವಾಸಿಗಳು ಎಚ್ಚರಿಸಿದ್ದಾರೆ.
0 comments:
Post a Comment