ಬಂಟ್ವಾಳ, ಜೂನ್ 09, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 24ರ ಪಾಣೆಮಂಗಳೂರು-ಆಲಡ್ಕ ಸಮೀಪದ ನಂದಾವರ ತಿರುವು ಬಳಿ ಕಳೆದ ಹಲವು ದಿನಗಳಿಂದ ಚರಂಡಿ ಬ್ಲಾಕ್ ಆಗಿ ದುರ್ನಾತ ಬೀರುತ್ತಿರುವ ಬಗ್ಗೆ ಕರಾವಳಿ ಅಲೆ ಸಚಿತ್ರ ವರದಿ ಪ್ರಕಟಿಸಿದ ಹಿನ್ನಲೆಯಲ್ಲಿ ಎಚ್ಚೆತ್ತ ಪುರಸಭಾಧಿಕಾರಿಗಳು ಕಣ್ಣಿಗೆ ಮಣ್ಣೆರಚುವ ತೇಪೆ ಕಾಮಗಾರಿ ನಡೆಸಿ ಕೈತೊಳೆದುಕೊಂಡಿದ್ದಾರೆ.
ನಂದಾವರ ಕ್ರಾಸ್ ಬಳಿ ಚರಂಡಿಯಲ್ಲಿ ಮಲಿನ ನೀರು ಹರಿದು ಹೋಗದೆ ಬ್ಲಾಕ್ ಆಗಿ ದುರ್ನಾತ ಬೀರುತ್ತಿತ್ತು. ಇಲ್ಲಿನ ಜನ ನಿತ್ಯವೂ ಈ ದುರ್ನಾತದ ಮಧ್ಯೆ ತಮ್ಮ ದೈನಂದಿನ ಕೆಲಸ-ಕಾರ್ಯಗಳನ್ನು ನಡೆಸುವಂತಾಗಿತ್ತು. ವಿದ್ಯಾರ್ಥಿಗಳ ಸಹಿತ ಹಲವು ಮಂದಿ ನಿತ್ಯವೂ ಇದೇ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದು, ಇವರೆಲ್ಲರೂ ಈ ಚರಂಡಿ ಕೊಳಚೆ ನೀರಿನ ಸಮಸ್ಯೆ ನಿತ್ಯವೂ ಎದುರಿಸುತ್ತಿದ್ದರು. ಮಳೆ ಬರಲಾರಂಭಿಸಿದೆ ಮಳೆ ನೀರು ಈ ಚರಂಡಿಯ ಕೊಳಚೆ ನೀರಿನೊಂದಿಗೆ ಸೇರಿಕೊಂಡು ಇಡೀ ಪರಿಸರದಲ್ಲಿ ಹರಿದಾಡಿ ಇನ್ನಷ್ಟು ದುರ್ನಾತ ಬೀರುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು.
ಈ ಬಗ್ಗೆ ಕರಾವಳಿ ಅಲೆ ಶುಕ್ರವಾರ ಸಚಿತ್ರ ವರದಿ ಪ್ರಕಟಿಸಿ ಪುರಸಭಾಧಿಕಾರಿಗಳನ್ನು ಎಚ್ಚರಿಸಿತ್ತು. ಪತ್ರಿಕಾ ವರದಿಯಿಂದ ಎಚ್ಚೆತ್ತ ಪುರಸಭೆ ಚರಂಡಿಯ ಕೊಳಚೆ ನೀರು ಹೊರಭಾಗಕ್ಕೆ ಕಾಣುತ್ತಿದ್ದ ಸ್ಥಳಕ್ಕೆ ಚಪ್ಪಡಿ ಕಲ್ಲು ಮುಚ್ಚಿನ ಕಣ್ಣಿಗೆ ಮಣ್ಣೆರಚುವ ತೇಪೆ ಕಾಮಗಾರಿ ನಡೆಸಿ ಸ್ಥಳ ಖಾಲಿ ಮಾಡಿದ್ದಾರೆ. ಚರಂಡಿಯ ಒಳಗೆ ಬ್ಲಾಕ್ ಆಗಿರುವ ಕೊಳಚೆ ನೀರು ಹರಿದು ಹೋಗಲು ಯಾವುದೇ ಸೂಕ್ತ ಪರಿಹಾರ ವ್ಯವಸ್ಥೆ ಮಾಡದೆ ಕಲ್ಲು ಮುಚ್ಚಿ ಹೋಗಿದ್ದು ಇದು ಸ್ಥಳೀಯ ನಿವಾಸಿಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯ ಪುರಸಭಾ ಸದಸ್ಯರುಗಳ ಗಮನಕ್ಕೂ ಈ ವಿಚಾರ ತಂದರೂ ಚರಂಡಿ ಕೊಳಚೆ ನೀರಿಗೆ ಯಾವುದೇ ಪರಿಹಾರ ಒದಗಿಸುವ ಕನಿಷ್ಠ ಭರವಸೆಯನ್ನೂ ನೀಡಿಲ್ಲ ಎನ್ನುವ ಸ್ಥಳೀಯರು ಮಳೆ ಬರುವುದಕ್ಕಿಂತ ಮುಂಚಿತವಾಗಿ ಇಲ್ಲಿನ ಕೊಳಚೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡದಿದ್ದಲ್ಲಿ ಅದು ಪೇಟೆ-ಪಟ್ಟಣಗಳಲ್ಲಿ ಹರಿದು ಸಾಂಕ್ರಾಮಿಕ ರೋಗ ಹರಡು ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
0 comments:
Post a Comment