670/- ದಂಡ ಶುಲ್ಕದೊಂದಿಗೆ ಜುಲೈ 10ರವರೆಗೆ ಹಾಗೂ ಜುಲೈ 20ರವರೆಗೆ 2,890/- ವಿಶೇಷ ದಂಡ ಶುಲ್ಕದೊಂದಿಗೆ ಪ್ರವೇಶಕ್ಕೆ ಅವಕಾಶ
ಬೆಂಗಳೂರು, ಜೂನ್ 22, 2023 (ಕರಾವಳಿ ಟೈಮ್ಸ್) : 2023-24ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ದಾಖಲಾತಿಗೆ ನೀಡಲಾಗಿದ್ದ ಅವಧಿಯನ್ನು ವಿಸ್ತರಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ದಂಡ ಶುಲ್ಕ ರಹಿತ ಪ್ರವೇಶಾವಕಾಶವನ್ನು ಜೂನ್ 30 ರವರೆಗೆ, ದಂಡ ಶುಲ್ಕ ಸಹಿತವಾಗಿ ಪ್ರವೇಶಾವಕಾಶವನ್ನು ಜುಲೈ 10 ರವರೆಗೆ ಹಾಗೂ ವಿಶೇಷ ದಂಡ ಶುಲ್ಕ ಪಾವತಿಸಿ ಪ್ರವೇಶ ಪಡೆಯುವ ಅವಕಾಶ ಅವಧಿಯನ್ನು ಜುಲೈ 20 ರವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಲು ಜೂನ್ 15 ಕೊನೆಯ ದಿನವಾಗಿತ್ತು. ದಂಡ ಶುಲ್ಕದೊಂದಿಗೆ ದಾಖಲಾತಿಗೆ ಜೂನ್ 22 ಕೊನೆ ದಿನವಾಗಿತ್ತು. ಆದರೆ, ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಿಗೆ ದಾಖಲಾತಿ ಬಯಸಿ ಬರುವ ಬಡ ವಿದ್ಯಾರ್ಥಿಗಳಿಗೆ ದಂಡ ಶುಲ್ಕ ಕಟ್ಟುವುದು ಕಷ್ಟವಾಗಲಿದೆ, ಹಾಗಾಗಿ ದಂಡ ಶುಲ್ಕ ರಹಿತ ದಾಖಲಾತಿಗೆ ಜೂನ್ 27 ರವರೆಗೆ ಕಾಲಾವಕಾಶ ವಿಸ್ತರಿಸುವಂತೆ ಮನವಿ ಮಾಡಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಇಲಾಖೆಗೆ ಪತ್ರ ಬರೆದಿತ್ತು.
ಈ ಮನವಿ ಪರಿಗಣಿಸಿದ ಇಲಾಖೆ ಇದೀಗ ಜೂನ್ 30 ರವರೆಗೆ ದಂಡ ಶುಲ್ಕ ರಹಿತ ದಾಖಲಾತಿಗೆ ಅವಕಾಶ ನೀಡಿದೆ. ಅಲ್ಲದೆ ಜೂನ್ 30 ರ ನಂತರ ಜುಲೈ 10 ರವರೆಗೆ 670/- ರೂಪಾಯಿ ದಂಡ ಶುಲ್ಕದೊಂದಿಗೆ, ಜುಲೈ 10 ರ ನಂತರ ಜುಲೈ 20 ರವರೆಗೆ 2,890/- ರೂಪಾಯಿ ವಿಶೇಷ ದಂಡ ಶುಲ್ಕ ಪಾವತಿಸಿ ದಾಖಲಾತಿ ಪಡೆಯಲು ಅವಕಾಶ ನೀಡಿ ಇಲಾಖೆ ಸುತ್ತೋಲೆ ಹೊರಡಿಸಿದೆ.
0 comments:
Post a Comment