ಮಂಗಳೂರು, ಜೂನ್ 17, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಹಿಲನ್ ಶನಿವಾರ (ಜೂನ್ 17) ಅಧಿಕಾರ ಸ್ವೀಕರಿಸಿದರು.
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ರವಿ ಕುಮಾರ್ ಅವರನ್ನು ವರ್ಗಾಯಿಸಿ ಶುಕ್ರವಾರ ಸರಕಾರ ಆದೇಶ ಹೊರಡಿಸಿತ್ತು. ರವಿಕುಮಾರ್ ಅವರಿಂದ ತೆರವಾದ ಸ್ಥಾನಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ನಿಯೋಜಿಸಲ್ಪಟ್ಟಿದ್ದ ಮುಲ್ಲೈ ಮುಹಿಲನ್ ಅವರು ಶನಿವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ನಿರ್ಗಮನ ಜಿಲ್ಲಾಧಿಕಾರಿ ರವಿ ಕುಮಾರ್ ಅವರು ಅಧಿಕಾರ ಹಸ್ತಾಂತರಿಸಿದರು.
ನೂತನ ಡಿಸಿ ಮುಲೈ ಮುಹಿಲನ್ ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಇದರ ಕಾರ್ಯಕಾರಿ ನಿರ್ದೇಶಕರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಮುಲ್ಲೈ ಮುಹಿಲನ್ ತಮಿಳುನಾಡು ಮೂಲದವರಾಗಿದ್ದು, ದಿಂಡಿಗಲ್ ಅಣ್ಣಾ ವಿಶ್ವವಿದ್ಯಾಲಯದ ಪಿಎಸ್‍ಎನ್‍ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿನಲ್ಲಿ ವ್ಯಾಸಂಗ ಮಾಡಿದ್ದು, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿ ಪಡೆದಿದ್ದಾರೆ.
1986 ರಲ್ಲಿ ಜನಿಸಿದ ಅವರು 2013 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
0 comments:
Post a Comment