ಬಂಟ್ವಾಳ, ಜೂನ್ 01, 2023 (ಕರಾವಳಿ ಟೈಮ್ಸ್) : ನಂದಾವರ ಅರಮನೆಹಿತ್ಲು ರಸ್ತೆಯನ್ನು ಸ್ಥಳೀಯ ನಿವಾಸಿ ಅಬ್ದುಲ್ ರಶೀದ್ ಎಂಬಾತ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಆವರಣ ಗೋಡೆ ನಿರ್ಮಿಸಿರುವ ಬಗ್ಗೆ ಸ್ಥಳೀಯ ನಿವಾಸಿಗಳ ಜೊತೆ ಬಂಟ್ವಾಳ ಬಿಜೆಪಿ ಪ್ರಮುಖರು ಆಕ್ಷೇಪಿಸಿ ಪ್ರತಿಭಟಿಸಿದ ಹಿನ್ನಲೆಯಲ್ಲಿ ಮಧ್ಯ ಪ್ರವೇಶಿಸಿದ ತಹಶೀಲ್ದಾರ್ ಆವರಣ ಗೋಡೆ ತೆರವುಗೊಳಿಸಿದ ಘಟನೆ ಗುರುವಾರ ವರದಿಯಾಗಿದೆ.
ಸ್ಥಳೀಯ ನಿವಾಸಿ ಅಬ್ದುಲ್ ರಶೀದ್ ಎಂಬವರು ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವ ವಿವಾದಿತ ಜಾಗದ ಮೇಲೆ ಅಕ್ರಮ ಹಕ್ಕು ಸ್ಥಾಪಿಸಲು ಯತ್ನಿಸಿ ಅಕ್ರಮವಾಗಿ ಆವರಣ ಗೋಡೆ ನಿರ್ಮಿಸುತ್ತಿದ್ದಾರೆ. ಇದರಿಂದ ಪರಿಸರದ ಸುಮಾರು 30 ಮನೆಗಳಿಗೆ ತೊಂದರೆಯಾಗುತ್ತದೆ ಎಂದು ಸ್ಥಳೀಯ ನಿವಾಸಿ ಮಹಿಳೆ ರೇಷ್ಮಾ ಎಂಬವರು ಸಜಿಪಮುನ್ನೂರು ಗ್ರಾಮ ಪಂಚಾಯತಿಗೆ ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಪಂಚಾಯತ್ ಪಿಡಿಒ ಅವರು ರಶೀದ್ ಅವರಿಗೆ ನೋಟಿಸ್ ನೀಡಿ ತೆರವು ಮಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಆದರೂ ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಿರ್ಮಿಸಿದ ತಡೆಗೋಡೆ ತೆರವು ಮಾಡದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಬಂಟ್ವಾಳ ಬಿಜೆಪಿ ಪ್ರಮುಖರು ತಡೆಗೋಡೆ ತೆರವು ಮಾಡುವಂತೆ ಆಗ್ರಹಿಸಿದ್ದರು. ಈ ಸಂದರ್ಭ ಸ್ಥಳದಲ್ಲಿ ಒಂದಷ್ಟು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಸುದ್ದಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ನೇತೃತ್ವದ ಪೊಲೀಸರು ಗೊಂದಲದ ಪರಿಸ್ಥಿತಿ ನಿವಾರಿಸಿ, ಸೂಕ್ತ ಕ್ರಮ ಕೈಗೊಳ್ಳಲು ತಹಶೀಲ್ದಾರ್ ಅವರಿಗೆ ಕೋರಿದ ಪೊಲೀಸ್ ಅಧಿಕಾರಿ ವಿವೇಕಾನಂದ ಅವರು ಸೂಕ್ತ ಬಂದೋಬಸ್ತ್ ಕೈಗೊಳ್ಳುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ತಹಶೀಲ್ದಾರ್ ಈ ಬಗ್ಗೆ ಚರ್ಚಿಸಿ ತಡೆಗೋಡೆ ತೆರವುಗೊಳಿಸುವಂತೆ ಆದೇಶೀಸಿದ್ದಾರೆ.
ಬಳಿಕ ವಿವಾದಿತತಡೆ ಗೋಡೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ತಡೆಗೋಡೆ ನಿರ್ಮಿಸಿದ ವ್ಯಕ್ತಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಬಿಜೆಪಿ ಮುಖಂಡರು ಬಿ ಸಿ ರೋಡು ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಪ್ರತಿಕ್ರಯಿಸಿದ ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರು ಈ ಬಗ್ಗೆ ಪಂಚಾಯತ್ ಪಿಡಿಒ ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ತೆರಳಿದ್ದಾರೆ.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಬಿ ದೇವದಾಸ್ ಶೆಟ್ಟಿ, ಡೊಂಬಯ ಅರಳ, ರಮಾನಾಥ ರಾಯಿ, ಪ್ರಭಾಕರ ಪ್ರಭು, ಸುದರ್ಶನ್ ಬಜ, ಪುರುಷೋತ್ತಮ ಶೆಟ್ಟಿ, ನಂದರಾಮ ರೈ, ಪವನ್‍ಕುಮಾರ್ ಶೆಟ್ಟಿ, ಪ್ರವೀಣ್ ಗಟ್ಟಿ, ಎನ್ ಧನಂಜಯ ಶೆಟ್ಟಿ, ಸುರೇಶ್ ಕೋಟ್ಯಾನ್, ಯಶೋಧರ ಕರ್ಬೆಟ್ಟು, ಮಾಧವ ಕರ್ಬೆಟ್ಟು, ಮಹೇಶ್ ಶೆಟ್ಟಿ, ಲಕ್ಷಣ್ ರಾಜ್, ಅಜಿತ್ ಶೆಟ್ಟಿ, ಪ್ರಶಾಂತ್ ಕೆಂಪುಗುಡ್ಡೆ, ಕಿಶೋರ್ ಶೆಟ್ಟಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment