ಬಂಟ್ವಾಳ, ಜೂನ್ 02, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಮುಖ್ಯ ಪೇಟೆ ಬಿ ಸಿ ರೋಡಿನಲ್ಲಿ ಪುರಸಭಾ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಹೋಗಿ ಕಳೆದ ಎರಡು-ಮೂರು ದಿನಗಳಿಂದ ನಿರಂತರವಾಗಿ ಜೀವಜಲ ಪೋಲಾಗುತ್ತಿದ್ದು, ಇದರಿಂದ ನೀರು ಪೋಲಾಗುವುದರ ಜೊತೆಗೆ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಕಿರಿ ಕಿರಿ ಅನುಭವಿಸುತ್ತಿರುವ ಬಗ್ಗೆ ಪತ್ರಿಕೆ ಗುರುವಾರ ವರದಿ ಪ್ರಕಟಿಸಿ ಎಚ್ಚರಿಸಿದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಪುರಸಭಾಧಿಕಾರಿಗಳು ತಕ್ಷಣ ಸ್ಪಂದಿಸಿದ್ದು, ಶುಕ್ರವಾರವೇ ಪೈಪ್ ಲೈನ್ ರಿಪೇರಿ ಕಾರ್ಯ ನಡೆಸಿದ್ದಾರೆ.
ಬಿ ಸಿ ರೋಡಿನ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ರಸ್ತೆಯ ಮಧ್ಯ ಭಾಗದಲ್ಲೇ ಜೀವಜಲ ಪೋಲಾಗುತ್ತಿದ್ದ ದೃಶ್ಯ ಕಳೆದ ಎರಡು-ಮೂರು ದಿನಗಳಿಂದ ಕಂಡು ಬಂದಿತ್ತು. ರಸ್ತೆಯಲ್ಲಿ ಹಾದು ಹೋಗಿರುವ ಪುರಸಭಾ ಕುಡಿಯುವ ನೀರಿನ ಪೈಪ್ ಒಡೆದು ಹೋಗಿ ಈ ಅವಾಂತರ ಸೃಷ್ಟಿಯಾಗಿತ್ತು. ಇದರಿಂದ ರಸ್ತೆಯಿಡೀ ನೀರು ಹರಿದು ಕೃತಕ ನೆರೆಯಂತಹ ಸನ್ನಿವೇಶ ನಿರ್ಮಾಣವಾಗಿತ್ತು.
ರಸ್ತೆಯ ಮಧ್ಯ ಭಾಗದಲ್ಲೇ ಕುಡಿಯುವ ನೀರು ಪೋಲಾಗಿ ಹರಿಯುತ್ತಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರು ಅನಾನುಕೂಲತೆ ಎದುರಿಸುವಂತಾಗಿತ್ತು. ಅಲ್ಲದೆ ಈ ಭಾಗದಲ್ಲಿರುವ ಅಂಗಡಿ-ಹೋಟೆಲ್ ಮಾಲಕರು ಕೂಡಾ ತೀರಾ ಕಿರಿ ಕಿರಿ ಅನುಭವಿಸುತ್ತಿದ್ದರು. ಈ ಬಗ್ಗೆ ಪುರಸಭಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಈ ಬಗ್ಗೆ ಪತ್ರಿಕೆಯ ಗಮನ ಸೆಳೆದಿದ್ದರು. ಈ ಹಿನ್ನಲೆಯಲ್ಲಿ ಕರಾವಳಿ ಟೈಮ್ಸ್ ಗುರುವಾರ ಸಚಿತ್ರ ವರದಿ ಪ್ರಕಟಿಸಿ ಸಮಸ್ಯೆಯ ಗಂಭೀರತೆಯ ಬಗ್ಗೆ ಪುರಸಭಾಧಿಕಾರಿಗಳ ಗಮನ ಸೆಳೆದಿತ್ತು.
ಇದರಿಂದ ತಕ್ಷಣ ಸ್ಪಂದಿಸಿದ ಪುರಸಭಾಧಿಕಾರಿಗಳು ಶುಕ್ರವಾರ ಬೆಳಿಗ್ಗೆಯೇ ಪುರಸಭಾ ಫ್ಲಂಬರ್ ಇಬ್ರಾಹಿಂ ಅವರ ಮೂಲಕ ಒಡೆದು ಹೋಗಿದ್ದ ಪೈಪ್ ಲೈನ್ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದು, ಜೀವಜಲ ಪೋಲಾಗುತ್ತಿರುವ ಬಗ್ಗೆ ಕ್ರಮ ಕೈಗೊಂಡಿದ್ದಾರೆ.
0 comments:
Post a Comment