ಮಂಗಳೂರು, ಜೂನ್ 06, 2023 (ಕರಾವಳಿ ಟೈಮ್ಸ್) : ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್‍ಗಿರಿ ತಡೆಯಲು ಆಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು.
ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಗೃಹ ಸಚಿವರು ಮಂಗಳವಾರ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಮಂಗಳೂರಿನಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ಇದು ನನಗೆ ಹೊಸ ಹುದ್ದೆ ಅಲ್ಲ. ಹೊಸ ಸವಾಲುಗಳು ಹುಟ್ಟಿಕೊಂಡಿವೆ ಮತ್ತು ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪೊಲೀಸ್ ಇಲಾಖೆಗೂ ಹೊಸ ಸವಾಲುಗಳು ಎದುರಾಗಿವೆ ಎಂದರು.
ನೈತಿಕ ಪೊಲೀಸ್‍ಗಿರಿ ತಡೆಯಲು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆಂಟಿ ಕಮ್ಯುನಲ್ ವಿಂಗ್ ಎಂಬ ಹೊಸ ಘಟಕ ಸ್ಥಾಪಿಸುತ್ತೇವೆ. ಆಂಟಿ ಕಮ್ಯುನಲ್ ವಿಂಗ್ ಘಟಕದಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ ಎಂದ ಗೃಹ ಸಚಿವರು, ಕರಾವಳಿ ಭಾಗದಲ್ಲಿ ಒಳ್ಳೆಯ ಜನರು ಇದ್ದಾರೆ ಅಂತಾ ನಂಬಿದ್ದೇವೆ. ಈ ಭಾಗದಲ್ಲಿ ಭಯದ ವಾತಾವರಣವಿದೆ ಅಂತಾ ಜನ ಮಾತಾಡ್ತಿದ್ದಾರೆ. ಕೋಮು ಸೌಹಾರ್ದತೆಯನ್ನು ತರಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.
ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್‍ಗಿರಿ ತುಂಬಾ ನಡೆಯುತ್ತಿದೆ. ಇದನ್ನು ತಡೆಯದಿದ್ದರೆ ಇಲಾಖೆ ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು ಬರಲಿದೆ. ಹಾಗಾಗಿ ನೈತಿಕ ಪೊಲೀಸ್‍ಗಿರಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆಗಸ್ಟ್ 15 ರೊಳಗೆ ಕರಾವಳಿ ಭಾಗ ಡ್ರಗ್ಸ್ ಮುಕ್ತ ಪ್ರದೇಶವಾಗಬೇಕು ಎಂದು ಡಾ ಪರಮೇಶ್ವರ ಅವರು ಪೊಲೀಸರಿಗೆ ಸೂಚನೆ ನೀಡಿದರು.
0 comments:
Post a Comment