ಬಂಟ್ವಾಳ, ಜೂನ್ 01, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಮುಖ್ಯ ಪೇಟೆ ಬಿ ಸಿ ರೋಡಿನಲ್ಲಿ ಪುರಸಭಾ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಹೋಗಿ ಕಳೆದ ಎರಡು-ಮೂರು ದಿನಗಳಿಂದ ನಿರಂತರವಾಗಿ ಜೀವಜಲ ಪೋಲಾಗುತ್ತಿದ್ದು, ಇದರಿಂದ ನೀರು ಪೋಲಾಗುವುದರ ಜೊತೆಗೆ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಕಿರಿ ಕಿರಿ ಅನುಭವಿಸುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ ಸಿ ರೋಡಿನ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ರಸ್ತೆಯ ಮಧ್ಯ ಭಾಗದಲ್ಲೇ ಈ ರೀತಿ ಜೀವಜಲ ಪೋಲಾಗುತ್ತಿರುವ ದೃಶ್ಯ ಕಂಡು ಬರುತ್ತಿದ್ದು, ರಸ್ತೆಯಲ್ಲಿ ಹಾದು ಹೋಗಿರುವ ಪುರಸಭಾ ಕುಡಿಯುವ ನೀರಿನ ಪೈಪ್ ಒಡೆದು ಹೋಗಿ ಈ ಅವಾಂತರ ಸೃಷ್ಟಿಯಾಗಿದೆ. ಇದರಿಂದ ರಸ್ತೆಯಿಡೀ ನೀರು ಹರಿದು ಕೃತಕ ನೆರೆಯಂತಹ ಸನ್ನಿವೇಶ ನಿರ್ಮಾಣವಾಗಿದೆ.
ಜೂನ್ ತಿಂಗಳಾರಂಭವಾದರೂ ತಾಲೂಕಿನಲ್ಲಿ ಮಳೆ ಸುರಿಯಲು ಆರಂಭಿಸಿಲ್ಲ. ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ತಾಲೂಕಿನ ಎಲ್ಲಾ ನೀರಿನ ಮೂಲಗಳೂ ಬತ್ತಿ ಹೋಗುವ ಲಕ್ಷಣಗಳು ಕಂಡು ಬರುತ್ತಿದೆ. ಈ ಮಧ್ಯೆ ಇರುವ ನೀರನ್ನು ಸಂಭಾಳಿಸಿಕೊಂಡು ಜನರಿಗೆ ಜೀವಜಲ ಒದಗಿಸಿಕೊಡಲು ಹೆಣಗಾಡುತ್ತಿರುವ ಸಂಧರ್ಭದಲ್ಲೇ ಈ ರೀತಿಯಾಗಿ ಜೀವಜಲ ಪೋಲಾದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಇನ್ನಷ್ಟು ಕಷ್ಟ ಎದುರಿಸುವ ಸಾಧ್ಯತೆ ಬಗ್ಗೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಮಧ್ಯ ಭಾಗದಲ್ಲೇ ಕುಡಿಯುವ ನೀರು ಪೋಲಾಗಿ ಹರಿಯುತ್ತಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ಸಾರ್ವಜನಿಕರು ಅನಾನುಕೂಲತೆ ಎದುರಿಸುವಂತಾಗಿದೆ. ಅಲ್ಲದೆ ಈ ಭಾಗದಲ್ಲಿರುವ ಅಂಗಡಿ-ಹೋಟೆಲ್ ಮಾಲಕರು ಕೂಡಾ ತೀರಾ ಕಿರಿ ಕಿರಿ ಅನುಭವಿಸುವಂತಾಗಿದೆ. ಈ ಬಗ್ಗೆ ಈಗಾಗಲೇ ಪುರಸಭಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್ನುವ ಸ್ಥಳೀಯರು ಕಳೆದ ಮೂರು ದಿನಗಳಿಂದಲೂ ನೀರು ಇದೇ ರೀತಿ ಪೋಲಾಗುತ್ತಲೇ ಇದೆ ಎನ್ನುತ್ತಾರೆ. ಪುರಸಭಾಧಿಕಾರಿಗಳು ತಕ್ಷಣ ಈ ಬಗ್ಗೆ ಗಮನಹರಿಸಿ ಜೀವಜಲ ಪೋಲಾಗುತ್ತಿರುವ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
0 comments:
Post a Comment