ಬೆಂಗಳೂರು, ಜೂನ್ 16, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷಕ್ಕೆ ಬಲಿಯಾದ ನಾಲ್ವರು ಅಮಾಯಕ ಯುವಕರ ಕುಟುಂಬಗಳಿಗೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಕೋಮು ವಿದ್ವೇಷಕ್ಕೆ ಬಲಿಯಾದ 2018ರ ಜನವರಿ 3 ರಂದು ಕೊಲೆಯಾದ ಕಾಟಿಪಳ್ಳದ ದೀಪಕ್ ರಾವ್, 2022 ರ ಜುಲೈ 19ರಂದು ಬಲಿಯಾದ ಬೆಳ್ಳಾರೆಯ ಮಸೂದ್, 28ರಂದು ಹತ್ಯೆಯಾದ ಮಂಗಳಪೇಟೆಯ ಮುಹಮ್ಮದ್ ಫಾಝಿಲ್, ಡಿಸೆಂಬರ್ 24ರಂದು ಬರ್ಬರವಾಗಿ ಕೊಲೆಗೀಡಾದ ಕಾಟಿಪಳ್ಳದ ಅಬ್ದುಲ್ ಜಲೀಲ್ ಎಂಬವರ ಕುಟುಂಬಗಳಿಗೆ ಸರಕಾರ ಈ ಪರಿಹಾರ ಘೋಷಿಸಿದೆ.
ಕಳೆದ ಬಿಜೆಪಿ ಸರಕಾರ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ಹಾಗೂ ಪತ್ನಿಗೆ ಸರಕಾರಿ ಉದ್ಯೋಗ ನೀಡಿ ಕೋಮು ವೈಷಮ್ಯಕ್ಕೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸಿ ಅನ್ಯಾಯ ಎಸಗಿತ್ತು ಎಂದು ಆರೋಪಿಸಿದ್ದ ಕಾಂಗ್ರೆಸ್ ತಮ್ಮ ಸರಕಾರ ಬಂದರೆ ಕೊಲೆಯಾದ ಇತರರಿಗೂ ಪರಿಹಾರ ಘೋಷಿಸಿ ನ್ಯಾಯ ಕೊಡುವುದಾಗಿ ಹೇಳಿಕೊಂಡಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಯನ್ನು ಈಡೇರಿಸಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಈ ಕೊಲೆಗಳು ಮತೀಯ ಕಾರಣಗಳಿಂದಾಗಿ ಆಗಿದ್ದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಿಸಲಾಗಿದೆ. ರಾಜ್ಯ ಪೆÇಲೀಸ್ ಇಲಾಖೆಯ ಮಹಾನಿರ್ದೇಶಕರು ಸರಕಾರದ ವತಿಯಿಂದ ಕೋಮು ದ್ವೇಷಕ್ಕೆ ಬಲಿಯಾದ ಕುಟುಂಬಕ್ಕೆ ಪರಿಹಾರ ಧನ ಮಂಜೂರು ಮಾಡುವಂತೆ ಒಳಾಡಳಿತ ಇಲಾಖೆಯನ್ನು ಕೋರಿದ ಮೇರೆಗೆ ಈ ಪರಿಹಾರ ಘೋಷಿಸಲಾಗಿದ್ದು, ಜೂನ್ 19 ರಂದು ಪರಿಹಾರದ ಧನದ ಚೆಕ್ ಪಡೆಯುವಂತೆ ಸೂಚಿಸಲಾಗಿದೆ ಎಂದು ಸರಕಾರ ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
0 comments:
Post a Comment