ಬಂಟ್ವಾಳ, ಜೂನ್ 07, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 24ರ ಪಾಣೆಮಂಗಳೂರು-ಆಲಡ್ಕ ಸಮೀಪದ ನಂದಾವರ ತಿರುವು ಬಳಿ ಕಳೆದ ಹಲವು ದಿನಗಳಿಂದ ಚರಂಡಿ ಬ್ಲಾಕ್ ಆಗಿ ದುರ್ನಾತ ಬೀರುತ್ತಿದ್ದು, ಸ್ಥಳೀಯರು ತೀವ್ರ ಪರಿಸರ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದಾರೆ.
ನಂದಾವರ ಕ್ರಾಸ್ ಬಳಿ ಚರಂಡಿಯಲ್ಲಿ ಮಲಿನ ನೀರು ಹರಿದು ಹೋಗದೆ ಬ್ಲಾಕ್ ಆಗಿ ದುರ್ನಾತ ಬೀರುತ್ತಿದೆ. ಇಲ್ಲಿನ ಜನ ನಿತ್ಯವೂ ಈ ದುರ್ನಾತದ ಮಧ್ಯೆ ತಮ್ಮ ದೈನಂದಿನ ಕೆಲಸ-ಕಾರ್ಯಗಳನ್ನು ನಡೆಸುವ ಅನಿವಾರ್ಯತೆ ಎದುರಾಗಿದೆ. ಈ ಪ್ರದೇಶದಲ್ಲಿ ಎರಡು ಪ್ರೌಢಶಾಲೆಗಳು, ಗ್ರಾಮ ಆಡಳಿತಾಧಿಕಾರಿ ಕಚೇರಿ, ಬ್ಯಾಂಕ್ ಸಹಿತ ಹಲವಾರು ಸಾರ್ವಜನಿಕ ಸೇವಾ ಸಂಸ್ಥೆಗಳಿದ್ದು, ವಿದ್ಯಾರ್ಥಿಗಳ ಸಹಿತ ಹಲವು ಮಂದಿ ನಿತ್ಯವೂ ಇದೇ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದಾರೆ. ಇವರೆಲ್ಲರೂ ಈ ಚರಂಡಿ ಕೊಳಚೆ ನೀರಿನ ಸಮಸ್ಯೆ ನಿತ್ಯವೂ ಎದುರಿಸುತ್ತಿದ್ದಾರೆ. ಇನ್ನೇನು ಮಳೆಗಾಲ ಆರಂಭಗೊಂಡರೆ ಮಳೆ ನೀರು ಈ ಚರಂಡಿಯ ಕೊಳಚೆ ನೀರಿನೊಂದಿಗೆ ಸೇರಿಕೊಂಡು ಇಡೀ ಪರಿಸರದಲ್ಲಿ ಹರಿದಾಡಿ ಇನ್ನಷ್ಟು ದುರ್ನಾತ ಬೀರುವ ಆತಂಕ ಎದುರಾಗಿದೆ.
ಸ್ಥಳೀಯ ಪುರಸಭಾ ಸದಸ್ಯರುಗಳು ನಿತ್ಯವೂ ಇದೇ ರಸ್ತೆಯಾಗಿ ಸಾವಿರಾರು ಸಂಚರಿಸುತ್ತಿದ್ದರೂ ಕಣ್ಣಿದ್ದೂ ಕುರುಡಾಗಿದ್ದಾರೆ ಎನ್ನುವ ಸ್ಥಳೀಯರು ಈ ಬಗ್ಗೆ ದೂರು ನೀಡಿದರೂ ಕ್ಯಾರೇ ಎನ್ನುತ್ತಿಲ್ಲ ಎನ್ನುತ್ತಾರೆ ವಾರ್ಡ್ ನಿವಾಸಿಗಳು. ಪುರಸಭಾಧಿಕಾರಿಗಳು ತಕ್ಷಣ ಇಲ್ಲಿನ ಚರಂಡಿ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಿ ಇಲ್ಲಿನ ನಿವಾಸಿಗಳನ್ನು ದುರ್ನಾತಯುಕ್ತ ಚರಂಡಿ ಸಮಸ್ಯೆಯಿಂದ ಪಾರುಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅದೇ ರೀತಿ ಈ ಭಾಗದಲ್ಲಿ ಪುರಸಭಾ ಕುಡಿಯುವ ನೀರಿನ ಸಂಪರ್ಕ ಪಡೆಯುವ ಸಾರ್ವಜನಿಕರಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಪ್ಲಂಬರ್ ಗಳು ರಸ್ತೆಗಳನ್ನು ಅಗೆದು ಹಾಕಿ ಅಲ್ಲೇ ಮಣ್ಣು ರಾಶಿ ಹಾಕಿ ತೆರಳುತ್ತಿದ್ದು ಅದೂ ಸಮಸ್ಯೆಗೆ ಕಾರಣವಾಗುತ್ತಿದೆ. ಬುಧವಾರ ಬಂಗ್ಲೆಗುಡ್ಡೆ ಶಾರದಾ ಹೈಸ್ಕೂಲ್ ಹಾಗೂ ಎಸ್ ಎಲ್ ಎನ್ ಪಿ ವಿದ್ಯಾಲಯದ ಬಳಿ ಖಾಸಗಿ ವ್ಯಕ್ತಿಗೆ ಪೈಪ್ ಲೈನ್ ಸಂಪರ್ಕ ಕಲ್ಪಿಸಿದ ಪುರಸಭಾ ಪ್ಲಂಬರ್ ರಸ್ತೆ ಅಗೆದು ಮಣ್ಣನ್ನು ಅಲ್ಲೇ ರಾಶಿ ಹಾಕಿದ ಪರಿಣಾಮ ಶಾಲಾ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಪುರಸಭಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
0 comments:
Post a Comment