ಬೆಂಗಳೂರು, ಜೂನ್ 28, 2023 (ಕರಾವಳಿ ಟೈಮ್ಸ್) : ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿರುವ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಅಕ್ಕಿ ನೀಡಲು ಕೇಂದ್ರ ಸರಕಾರ ನಿರಾಕರಿಸಿದ ಹಿನ್ನಲೆಯಲ್ಲಿ ಇದೀಗ ರಾಜ್ಯ ಸರಕಾರ ಕೊನೆಗೂ ಪರಿಹಾರ ಕಂಡುಕೊಂಡಿದ್ದು, ಪ್ರತಿ ಬಿಪಿಎಲ್ ಕಾರ್ಡುದಾರರಿಗೂ 5 ಕೆಜಿ ಅಕ್ಕಿಯ ಜತೆಗೆ ಉಳಿಕೆ ಐದು ಕೆಜಿ ಅಕ್ಕಿಗೆ ಸಮಾನವಾಗಿ ನಗದು ಹಣ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಕೇಂದ್ರ ಸರಕಾರದ ಹಠಮಾರಿ ಧೋರಣೆಗೆ ರಾಜ್ಯ ಸರಕಾರ ತನ್ನದೇ ಆದ ರೀತಿಯಲ್ಲಿ ಠಕ್ಕರ್ ನೀಡಿದೆ. ರಾಜ್ಯ ಸರಕಾರ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದು, ಜುಲೈ 1 ರಿಂದಲೇ ಇದು ಜಾರಿಗೆ ಬರಲಿದೆ ಎನ್ನಲಾಗಿದೆ.
5 ಕೆಜಿ ಅಕ್ಕಿಯ ಜತೆಗೆ ತಲಾ 1 ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ನಗದು ಹಣ ನೀಡಲು ಸರಕಾರ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಬಿಪಿಎಲ್ ಕಾರ್ಡುದಾರರು ಅಕ್ಕಿ ಜೊತೆಗೆ 5 ಕೆಜಿಯ ನಗದು ಹಣವನ್ನು ಪಡೆದುಕೊಳ್ಳಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಆಹಾರ ಸಚಿವ ಮುನಿಯಪ್ಪ, ಬಿಪಿಎಲ್ ಕಾರ್ಡುದಾರರ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತದೆ. ಶೇ. 99 ರಷ್ಟು ಕಾರ್ಡ್‍ದಾರರ ಬಳಿ ಬ್ಯಾಂಕ್ ಖಾತೆ ಇದೆ. ಅವರ ಖಾತೆಗೆ 170 ರೂಪಾಯಿ ಹಣ ಜಮೆ ಮಾಡಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಯಜಮಾನಿಯ ಖಾತೆಗೆ ಹಣ ಜಮೆ ಆಗುತ್ತದೆ. ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ಸರಬರಾಜು ದೊರೆಯುವವರೆಗೆ ಹಣ ನೀಡಲು ತೀರ್ಮಾನ ಮಾಡಲಾಗಿದೆ ಎಂದರು.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡಾ ಪ್ರತಿಕ್ರಯಿಸಿದ್ದು, 5 ಕೆಜಿ ಅಕ್ಕಿಯ ಜತೆಗೆ ಇನ್ನೈದು ಕೆಜಿ ಅಕ್ಕಿಯ ಹಣ ಕೊಡಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರಕಾರ ಅಕ್ಕಿ ಕೊಡಲು ಆಗಲ್ಲ ಎಂದಿದೆ. ನಾವು ಪುಕ್ಕಟೆ ಕೇಳ್ತಾ ಇಲ್ಲ, ಆದರೂ ಅವರು ರಾಜಕೀಯ ಮಾಡ್ತಿದ್ದಾರೆ. ಅಕ್ಕಿ ಕೊಡುವ ಕೆಲಸಕ್ಕೆ ಕಲ್ಲು ಹಾಕ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ ಕೆಲ ದಿನಗಳಿಂದ ಅಕ್ಕಿ ಬಗ್ಗೆ ನಡೆಯುತ್ತಿದ್ದ ಜಂಘೀ ಕುಸ್ತಿಗೆ ಕೊನೆಗೂ ಸಿದ್ದು ಸರಕಾರ ಪರಿಹಾರ ಕಂಡುಕೊಂಡಿದ್ದು, ಘೋಷಿಸಿದ ಗ್ಯಾರಂಟಿ ಯೋಜನೆಯಿಂದ ಫಲಾನುಭವಿಗಳು ವಂಚಿತರಾಗದಂತೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿದೆ. ಹೀಗಾಗಿ ಜುಲೈ 1 ರಿಂದ 5 ಕೆಜಿ ಅಕ್ಕಿಯ ಜತೆಗೆ ಉಳಿದ 5 ಕೆಜಿ ಅಕ್ಕಿಗೆ ಸರಿಸಮಾನವಾದ 170/- ರೂಪಾಯಿ ಹಣವನ್ನು ಫಲಾನುಭವಿಗಳು ಪಡೆಯಲಿದ್ದಾರೆ.
0 comments:
Post a Comment