ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ಐದೂ ಗ್ಯಾರಂಟಿ ಜಾರಿ ಮಾಡಿದ ಕರ್ನಾಟಕ ಸರಕಾರ : ಮತ್ತೊಮ್ಮೆ ನುಡಿದಂತೆ ನಡೆದ ಸಿಎಂ ಎಂಬ ಜನಮನ್ನಣೆಗೆ ಪಾತ್ರರಾದ ಸಿದ್ದರಾಮಯ್ಯ - Karavali Times ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ಐದೂ ಗ್ಯಾರಂಟಿ ಜಾರಿ ಮಾಡಿದ ಕರ್ನಾಟಕ ಸರಕಾರ : ಮತ್ತೊಮ್ಮೆ ನುಡಿದಂತೆ ನಡೆದ ಸಿಎಂ ಎಂಬ ಜನಮನ್ನಣೆಗೆ ಪಾತ್ರರಾದ ಸಿದ್ದರಾಮಯ್ಯ - Karavali Times

728x90

2 June 2023

ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ಐದೂ ಗ್ಯಾರಂಟಿ ಜಾರಿ ಮಾಡಿದ ಕರ್ನಾಟಕ ಸರಕಾರ : ಮತ್ತೊಮ್ಮೆ ನುಡಿದಂತೆ ನಡೆದ ಸಿಎಂ ಎಂಬ ಜನಮನ್ನಣೆಗೆ ಪಾತ್ರರಾದ ಸಿದ್ದರಾಮಯ್ಯ

ಬೆಂಗಳೂರು, ಜೂನ್ 02, 2023 (ಕರಾವಳಿ ಟೈಮ್ಸ್) : ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ರಾಜ್ಯದ ಜನತೆಗೆ ನೀಡಲಾಗಿದ್ದ ಐದೂ ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಶುಕ್ರವಾರ ಜಾರಿಗೊಳಿಸುವ ಅಧಿಕೃತ ಘೋಷಣೆ ಮಾಡುವ ಮೂಲಕ ಮತ್ತೊಮ್ಮೆ ನುಡಿದಂತೆ ನಡೆದ ಖ್ಯಾತಿಯನ್ನು ಸಿಎಂ ಸಿದ್ದರಾಮ್ಯ ಉಳಿಸಿಕೊಂಡಿದ್ದಾರೆ. 

ರಾಜ್ಯದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಸಿಎಂ ಹಾಗೂ ಡಿ ಕೆ ಶಿವಕುಮಾರ್ ಅವರನ್ನು ಡಿಸಿಎಂ ಎಂದು ಘೋಷಿಸಿದಾಗಲೇ ರಾಜ್ಯದ ಜನ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದು ಗ್ಯಾರಂಟಿ ಎಂಬ ಭರವಸೆ ಇಟ್ಟುಕೊಂಡು ಕಾಯುತ್ತಿದ್ದರು. ಈ ಬಗ್ಗೆ ಸಿಎಂ ಹಾಗೂ ಡಿಸಿಎಂಗಳು ಕೂಡಾ ಗ್ಯಾರಂಟಿ ಯೋಜನೆ ಜಾರಿ ಮಾಡಿಯೇ ಸಿದ್ದ ಎಂಬ ಭರವಸೆಯನ್ನೂ ನೀಡಿದ್ದರು. ಅದರಂತೆ ಇದೀಗ ಶುಕ್ರವಾರ (ಜೂನ್ 2) ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ಜಾರಿಗೆ ನಿರ್ಧಾರ ಕೈಗೊಂಡಿದ್ದಾರೆ. 

ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಲಾಗಿದ್ದ ಐದೂ ಉಚಿತ ಗ್ಯಾರೆಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. 

ನಾವು 5 ಘೋಷಣೆ ಮಾಡಿ ಚುನಾವಣೆ ಎದುರಿಸಿದ್ದೇವೆ. ಈ ಗ್ಯಾರೆಂಟಿ ಯೋಜನೆ ಕಾರ್ಡ್‍ಗೆ ಸಹಿ ಹಾಕಿ ಜನರಿಗೆ ಆಶ್ವಾಸನೆ ಕೊಟ್ಟಿದ್ದೆವು. ಇದರ ನಡುವೆ ವಿರೋಧ ಪಕ್ಷದವರು ಇದನ್ನು ಪ್ರಶ್ನೆ ಮಾಡಿದ್ದಾರೆ. ಸರ್ಕಾರ ರಚನೆಯಾದ ಬಳಿಕ ಸಂಪುಟ ಸಭೆ ನಡೆಸಿದ 5 ಗ್ಯಾರೆಂಟಿ ಯೋಜನೆ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೆವು. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಐದು ಗ್ಯಾರೆಂಟಿ ಜಾರಿಗಾಗಿ ಚರ್ಚೆ ನಡೆಸಿದ್ದೇವೆ. 5 ಗ್ಯಾರೆಂಟಿಯನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸಬೇಕು ಅನ್ನೋ ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಯಾವುದೇ ಜಾತಿ, ಭಾಷೆ, ಧರ್ಮ ಮಿತಿಗಳಿಲ್ಲದೆ ಈ ಗ್ಯಾರೆಂಟಿ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದಿದ್ದಾರೆ.

ಒಂದನೇ ಗ್ಯಾರೆಂಟಿಯಾಗಿರುವ ಗೃಹ ಜ್ಯೋತಿ ಯೋಜನೆಯಡಿ ರಾಜ್ಯದ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆ ಜಾರಿಗೆ ತರುತ್ತಿದ್ದೇವೆ. ಒಂದು ಕುಟುಂಬ 12 ತಿಂಗಳಲ್ಲಿ ಎಷ್ಟು ವಿದ್ಯುತ್ ಬಳಿಸಿದ್ದಾರೆ. ಇದರ ಸರಾಸರಿ ತೆಗೆದು ಅದರ ಮೇಲೆ 10 ಪರ್ಸೆಂಟ್ ಹೆಚ್ಚಿಗೆ ಮಾಡಿ ಲೆಕ್ಕ ತೆಗೆದುಕೊಳ್ಳುತ್ತೇವೆ. ಒಬ್ಬ ಒಂದು ತಿಂಗಳು 190 ಯುನಿಟ್ ಖರ್ಚು ಮಾಡಿರಬಹುದು. ಇನ್ನೊಂದು ತಿಂಗಳು 180 ಯುನಿಟ್ ವಿದ್ಯುತ್ ಬಳಸಿರಬಹುದು. ಆದರೆ 12 ತಿಂಗಳಲ್ಲಿ ಆತನ ಸರಾಸರಿ ಯುನಿಟ್ ಬಳಕೆಯ ಮೇಲೆ ಸರಕಾರ 10 ಪರ್ಸೆಂಟ್ ಹೆಚ್ಚು ಸೇರಿಸಲಾಗುತ್ತದೆ. ಈ ವೇಳೆ ಸರಾಸರಿ 200 ಯುನಿಟ್ ಒಳಗಿದ್ದರೆ ವಿದ್ಯುತ್ ಉಚಿತವಾಗಲಿದೆ. 

2ನೇ ಗ್ಯಾರೆಂಟಿಯಾಗಿರುವ ಗೃಹ ಲಕ್ಷ್ಮಿ ಯೋಜನೆಯಡಿ ಆಗಸ್ಟ್ 15 ರಿಂದ ಗೃಹ ಲಕ್ಷ್ಮಿ ಯೋಜನೆ ಜಾರಿಯಾಗಲಿದೆ. ಆಗಸ್ಟ್ 15 ರಂದು ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ಜಮಾ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕಾಗಿ ಮನೆಯ ಯಜಮಾನಿ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆ ನೀಡಬೇಕು. ಇದಕ್ಕಾಗಿ ಮನೆಯ ಯಜಮಾನಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರರಿಗೆ ಹಣ ಜಮಾವಣೆಯಾಗಲಿದೆ. ಒಂದು ಕುಟುಂಬ ಹೇಳುವ ಯಜಮಾನಿಗೆ 2,000 ರೂಪಾಯಿ ಹಣ ಜಮಾವಣೆ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಕೆಲ ತಾಂತ್ರಿಕ ಸಮಸ್ಯೆಗಳಿರುವ ಕಾರಣ ಈ ಯೋಜನೆಗೆ ಅರ್ಜಿ ಆಹ್ವಾನಿಸಿ, ಮನೆಯ ಯಜಮಾನಿಯ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಜೂನ್ 15 ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಯಾವುದೇ ಕಂಡೀಷನ್ ಇಲ್ಲದೆ ಗೃಹ ಲಕ್ಷ್ಮಿ ಯೋಜನೆ ಜಾರಿಗೊಳಿಸುತ್ತಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಭದ್ರತಾ ಪಿಂಚಣಿ, ಹಿರಿಯರ ಪಿಂಚಣಿ ಜೊತೆಗೆ ಸರಕಾರದ 2,000 ರೂಪಾಯಿ ಗೃಹ ಲಕ್ಷ್ಮಿ ಯೋಜನೆ ಲಾಭ ಸಿಗಲಿದೆ ಎಂದರು. 

3ನೇ ಗ್ಯಾರಂಟಿಯಾಗಿರುವ ಅನ್ನ ಭಾಗ್ಯ ಯೋಜನೆಯಡಿ ಜುಲೈ 1 ರಿಂದ ಎಲ್ಲಾ ಬಿಪಿಎಲ್  ಹಾಗೂ ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಆಹಾರ ಧಾನ್ಯ ವಿತರಣೆಯಾಗಲಿದೆ ಎಂದು ಸಿಎಂ ತಿಳಿಸಿದರು. 

4ನೇ ಗ್ಯಾರಂಟಿಯಾಗಿರುವ ಶಕ್ತಿ ಯೋಜನೆಯಡಿ ರಾಜ್ಯದ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ಮಹಿಳೆಯರಿಗೆ ಜೂನ್ ತಿಂಗಳ 11 ರಿಂದ ಉಚಿತ ಬಸ್ ಪ್ರಯಾಣದ ಸೌಲಭ್ಯ ದೊರೆಯಲಿದೆ. ಈ ಯೋಜನೆ ಕರ್ನಾಟಕದ ರಾಜ್ಯದೊಳಗೆ ಅನ್ವಯವಾಗುತ್ತದೆ. ಎಸಿ, ಸ್ಲೀಪರ್ ಹಾಗೂ ಐಷಾರಾಮಿ ಬಸ್ ಹೊರತುಪಡಿಸಿ ಉಳಿದ ಎಲ್ಲಾ ಬಸ್‍ಗಳಲ್ಲಿ ಮಹಿಳೆಯರು ಪ್ರಯಾಣ ಉಚಿತವಾಗಿದೆ. ರಾಜ್ಯದಿಂದ ತಿರುಪತಿ ಹೋಗುವ ಅಥವಾ ರಾಜ್ಯದಿಂದ ಹೊರ ರಾಜ್ಯಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನ್ವಯವಾಗುವುದಿಲ್ಲ. ಮಹಿಳೆಯರು, ವಿದ್ಯಾರ್ಥನಿಯರು ಜೂನ್ 11 ರಿಂದ ಯಾವುದೇ ಹಣ ಪಾವತಿಸದೇ ಪ್ರಯಾಣ ಮಾಡಬಹುದು. ಬಿಎಂಟಿಸಿ ಬಸ್‍ನಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಸಿದ್ದರಾಯ್ಯ ಘೋಷಿಸಿದ್ದಾರೆ. ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಶೇಕಡಾ 50 ರಷ್ಟು ರಿಸರ್ವ್ ಮಾಡಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ. 

ಇನ್ನು 5ನೇ ಗ್ಯಾರಂಟಿ ಯೋಜನೆಯಾಗಿರುವ ಯುವನಿಧಿ ಯೋಜನೆಯಡಿ ಪ್ರಸಕ್ತ ವರ್ಷ ಅಂದರೆ 2022-23ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಎಲ್ಲಾ ಪದವೀಧರರು, ವೃತ್ತಿಪರ ಕೋರ್ಸ್ ಮಾಡಿದವರಿಗೂ ಯುವನಿಧಿ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಬಹುದು. 24 ತಿಂಗಳವರೆಗೆ ಪ್ರತಿ ತಿಂಗಳಿಗೆ 3,000 ರೂಪಾಯಿ ಪದವೀಧರರಿಗೆ, ಡಿಪೆÇ್ಲೀಮಾ ಕೋರ್ಸ್ ಮಾಡಿದವರಿಗೆ 2,000 ರೂಪಾಯಿ ನೀಡಲಾಗುತ್ತದೆ. ಇದರೊಳಗೆ ಕೆಲಸಕ್ಕೆ ಸೇರಿದವರಿಗೆ ಈ ಯೋಜನೆ ಮುಂದುವರಿಯುವುದಿಲ್ಲ. ಇದು ನಿರುದ್ಯೋಗಿ ಯುವಕರಿಗೆ ನೀಡುವ ಯೋಜನೆಯಾಗಲಿದೆ. ಈ ವರ್ಷ ಪಾಸ್ ಆದ ನಿರುದ್ಯೋಗಿ ಯುವ ಸಮೂಹಕ್ಕೆ ಹಣ ಜಮಾ ಮಾಡಲಾಗುತ್ತದೆ. ಗಂಡು, ಹೆಣ್ಣು ಹಾಗೂ ಮಂಗಳಮುಖಿಯರಿಗೂ ಈ ಯೋಜನೆ ಸಿಗಲಿದೆ ಎಂದು ಸಿಎಂ ಘೋಷಿಸಿದರು. 

ಕಾಲೇಜು, ವೃತ್ತಿಪರ ಕೋರ್ಸ್ ಮುಗಿಸಿ ಕೆಲಸ ಸಿಗದ ಯುವ ಸಮೂಹಕ್ಕೆ ಈ ಯೋಜನೆ ಲಾಭ ಸಿಗಲಿದೆ. ಓರ್ವ ನಿರುದ್ಯೋಗಿಗೆ 2 ವರ್ಷ ಸರಕಾರ ಹಣ ಜಮಾ ಮಾಡಲಾಗುತ್ತದೆ ಎಂದ ಸಿದ್ದರಾಮಯ್ಯ ನಮ್ಮದು ನುಡಿದಂತೆ ನಡೆಯುವ ಸರಕಾರ. ಬಿಜೆಪಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇಲ್ಲ. ಪ್ರಧಾನಿ ಮೋದಿ 15 ಲಕ್ಷ ರೂಪಾಯಿ ಕೊಡುತ್ತೇವೆ ಅಂದ್ರು, ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ಪೆಟ್ರೋಲ್-ಡೀಸೆಲ್ ಬೆಲೆ ಕಡಿತಗೊಳಿಸುವುದಾಗಿ ಹೇಳಿದ್ದಾರೆ. ಯಾವುದಾದರೂ ಮಾಡಿದ್ರಾ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರಶ್ನಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ಐದೂ ಗ್ಯಾರಂಟಿ ಜಾರಿ ಮಾಡಿದ ಕರ್ನಾಟಕ ಸರಕಾರ : ಮತ್ತೊಮ್ಮೆ ನುಡಿದಂತೆ ನಡೆದ ಸಿಎಂ ಎಂಬ ಜನಮನ್ನಣೆಗೆ ಪಾತ್ರರಾದ ಸಿದ್ದರಾಮಯ್ಯ Rating: 5 Reviewed By: karavali Times
Scroll to Top