ಮೃತದೇಹ ಮೇಲೆತ್ತಿದ ಮೊಹಮ್ಮದ್, ಶಮೀರ್, ಅಶ್ರಫ್
ಬಂಟ್ವಾಳ, ಮೇ 18, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಹೊಸ ನೇತ್ರಾವತಿ ಸೇತುವೆ ಮೇಲಿನಿಂದ ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮಧ್ಯಾಹ್ನದ ವೇಳೆಗೆ ನಡೆದಿದೆ.
ಕಲ್ಲಡ್ಕ ಸಮೀಪದ ಗೋಳ್ತಮಜಲು ಗ್ರಾಮದ ನೆಟ್ಲ ನಿವಾಸಿ ಪ್ರವೀಣ್ ಕುಲಾಲ್ ಎಂಬಾತನೇ ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ.
ಗುರುವಾರ ಬೈಕಿನಲ್ಲಿ ಬಂದ ಪ್ರವೀಣ ಮಟ ಮಟ ಮಧ್ಯಾಹ್ನ 1 ಗಂಟೆ ವೇಳೆಗೆ ಏಕಾಏಕಿ ಪಾಣೆಮಂಗಳೂರು ಹೊಸ ನೇತ್ರಾವತಿ ಸೇತುವೆಯ ಮಧ್ಯಭಾಗದಲ್ಲಿ ಬೈಕ್ ನಿಲ್ಲಿಸಿ, ಹೆಲ್ಮೆಟ್ ಹಾಗೂ ಪಾದರಕ್ಕೆಯನ್ನು ಸೇತುವೆಯ ಮೇಲೆಯೇ ಇಟ್ಟು ನದಿಗೆ ಹಾರಿದ್ದಾನೆ. ಈತ ಹಾರಿದ್ದನ್ನು ಕೆಲ ವಾಹನ ಸವಾರರು ಪ್ರತ್ಯಕ್ಷವಾಗಿ ನೋಡಿದ್ದಾರೆ ಎನ್ನಲಾಗಿದ್ದು, ನದಿಗೆ ಹಾರಿದ ತಕ್ಷಣ ಈತ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.
ಯುವಕ ನದಿಗೆ ಹಾರಿದ ವಿಷಯ ತಿಳಿಯುತ್ತಲೇ ಕಾರ್ಯಪ್ರವೃತ್ತರಾದ ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳೀಯ ಈಜುಪಟು ಯುವಕರ ಸಹಕಾರದಿಂದ ಹುಡುಕಾಟ ಆರಂಭಿಸಿದ್ದಾರೆ. ಮಧ್ಯಾಹ್ನ ಸುಮಾರು 2.30 ರ ವೇಳೆಗೆ ಸ್ಥಳೀಯ ಈಜುಪಟು ಯುವಕರಾದ ಮೊಹಮ್ಮದ್ ಎಂ ಕೆ, ಶಮೀರ್ ಚಮ್ಮಿ ಗೂಡಿನಬಳಿ ಹಾಗೂ ಅಶ್ರಫ್ ಅಕ್ಕರಂಗಡಿ ಅವರು ನದಿಯಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ.
ಬೈಕ್ ಫಿಟ್ಟರ್ ಕೆಲಸ ಮಾಡುತ್ತಿದ್ದ ಮೃತ ಪ್ರವೀಣ್ ಕಳೆದ ಕೆಲ ಸಮಯಗಳಿಂದ ಯಾವುದೋ ಮಾನಸಿಕ ಒತ್ತಡಕ್ಕೊಳಗಾಗಿ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕಾಗಿ ಆತ್ಮಹತ್ಯೆ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಗುರುವಾರ ಬೆಳಿಗ್ಗೆ ಈತ ತನ್ನ ಸ್ನೇಹಿತರ ವಾಟ್ಸಪ್ ಗುಂಪುಗಳಿಗೆ ತಾನು ಸಾಯುವ ಬಗ್ಗೆ ಸಂದೇಶ ರವಾನಿಸಿದ್ದ ಎನ್ನಲಾಗಿದ್ದು, ಇದನ್ನು ನೋಡಿದ ಸ್ನೇಹಿತರು ಆತನಿಗೆ ಕರೆ ಮಾಡಿದರೂ ಆತ ಸ್ವೀಕಾರ ಮಾಡಿಲ್ಲ ಎನ್ನಲಾಗಿದೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಆತನ ಮೊಬೈಲ್ ಟ್ರೇಸ್ ಮೂಲಕ ಆತ ಇರುವ ಸ್ಥಳ ಗುರುತಿಸುವಷ್ಟರಲ್ಲಿ ಆತ ನದಿಗೆ ಹಾರಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment