ಬೆಳ್ತಂಗಡಿ, ಮೇ 20, 2023 (ಕರಾವಳಿ ಟೈಮ್ಸ್) : ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರೋಡಿ ಗ್ರಾಮದ ಕಾಂತರಪಲ್ಕೆ ಎಂಬಲ್ಲಿ ಅಕ್ರಮವಾಗಿ ಗೋವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾಂಸ ಹಾಗೂ ಇತರ ಸಾಮಾಗ್ರಿಗಳನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಸ್ಥಳೀಯ ನಿವಾಸಿ, ಆರೋಪಿ ಅಬ್ದುಲ್ ಅಝೀದ್ ಬಿನ್ ಇಸುಬು ಎಂಬಾತ ತನ್ನ ವಾಸ್ತವ್ಯವಿಲ್ಲದ ಹಳೆ ಕಟ್ಟಡದಲ್ಲಿ ಅಕ್ರಮವಾಗಿ ಗೋವನ್ನು ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡಲು ಆಟೋ ರಿಕ್ಷಾದಲ್ಲಿ ಮಾಂಸದ ತೊಟ್ಟೆಗಳನ್ನು ಇಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ವೇಣೂರು ಠಾಣಾ ಪಿಎಸೈ ಶ್ರೀ ಶೈಲ ಡಿ ಮುಗೋಡು ನೇತೃತ್ವದ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭ ಆರೋಪಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಪೊಲೀಸರು ಸ್ಥಳದಲ್ಲಿದ್ದ ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಆಟೋ ರಿಕ್ಷಾ, 6 ಸಾವಿರ ರೂಪಾಯಿ ಮೌಲ್ಯದ 30 ಕೆಜಿ ತೂಕದ ದನದ ಮಾಂಸ, ಮಾಂಸ ಮಾಡಲು ಉಪಯೋಗಿಸಿದ ಸಲಕರಣೆಗಳು, ಜಾನುವಾರು ಚರ್ಮ, ತಲೆ, ಬುರುಡೆ ಇತ್ಯಾದಿ ಕಲ್ಮಶಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 32/2023 ಕಲಂ 4, 12 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment