ಚುನಾವಣೆಗೆ ಗೆದ್ದ ಬಳಿಕ ಮೊದಲ ಬಾರಿಗೆ ಪೂಜಾರಿ ಮನೆಗೆ ಭೇಟಿ ನೀಡಿದ ಯುಟಿಕೆ
ಬಂಟ್ವಾಳ, ಮೇ 17, 2023 (ಕರಾವಳಿ ಟೈಮ್ಸ್) : ಉಪಮುಖ್ಯಮಂತ್ರಿ, ಸಚಿವಗಿರಿ, ಸರಕಾರದಲ್ಲಿ ಹುದ್ದೆಗಳು ಅದೇನಿದ್ದರೂ ಸೆಕೆಂಡರಿ. ಪ್ರಥಮವಾಗಿ ಅಂಬೇಡ್ಕರ್ ನಿರ್ಮಿತ ಸಂವಿಧಾನಕ್ಕೆ ವಿರೋಧವಾಗಿದ್ದ ಬಿಜೆಪಿ ಪಕ್ಷದ ಅಧಿಕಾರವನ್ನು ಅಂತ್ಯಗೊಳಿಸಿ ಅಂಬೇಡ್ಕರ್ ಅವರ ಸಂವಿಧಾನ ಒಪ್ಪುವ, ಅದಕ್ಕೆ ಪೂರಕವಾಗಿ ಜನಪರ ಕೆಲಸ ಮಾಡುವ ಕಾಂಗ್ರೆಸ್ ಪಕ್ಷದ ಸರಕಾರವನ್ನು ಅಧಿಕಾರಕ್ಕೆ ತಂದಿರುವ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸುತ್ತಾ ಅದುವೇ ಒಂದು ರೀತಿಯ ಖುಷಿಯ ವಿಚಾರವಾಗಿದೆ ಎಂದು ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ನೂತನ ಚುನಾಯಿತ ಕಾಂಗ್ರೆಸ್ ಅಭ್ಯರ್ಥಿ ಯು ಟಿ ಖಾದರ್ ಸಂತಸ ವ್ಯಕ್ತಪಡಿಸಿದರು.
ಚುನಾವಣೆ ಗೆದ್ದ ಬಳಿಕ ಮೊದಲ ಬಾರಿಗೆ ಬುಧವಾರ ಸಂಜೆ ಹಿರಿಯ ಕಾಂಗ್ರೆಸ್ ನಾಯಕ ಬಿ ಜನಾರ್ದನ ಪೂಜಾರಿ ಅವರ ಬಂಟ್ವಾಳದ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಹಾಗೂ ಸಲಹೆ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಿಂದಲೇ ಸೂಕ್ತ ಸಲಹೆ-ಸೂಚನೆ ಹಾಗೂ ಆಶಿರ್ವಾದಗಳನ್ನು ನೀಡುತ್ತಾ ಬಂದಿರುವ ರಾಜಕೀಯ ಹಾಗೂ ಸಾಮಾಜಿಕ ಜೀವನದ ಗುರು ಬಿ ಜನಾರ್ದನ ಪೂಜಾರಿ ಅವರ ಸಲಹೆ-ಸೂಚನೆಯಂತೆ ಪಕ್ಷದ ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿ, ವಿಶ್ವಾಸಕ್ಕೆ ಪಡೆದುಕೊಂಡು ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವುದರ ಜೊತೆಗೆ ಸರಕಾರಿ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಪ್ರಯತ್ನ ಮಾಡುತ್ತೇನೆ. ಅದೇ ರೀತಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಹಾಗೂ ಸೋದರತ್ವ ಕಾಪಾಡುವ ಮೂಲಕ ಅಭಿವೃದ್ದಿಗೂ ಒತ್ತು ನೀಡಲಾಗುವುದು ಎಂದರು.
ಪಕ್ಷ ನನಗೆ ನೀಡಿದ ಜವಾಬ್ದಾರಿಗಳನ್ನು ಈ ಹಿಂದೆಯೂ ಅತ್ಯಂತ ನಿಷ್ಠೆ, ಪ್ರಾಮಾಣಿಕತೆ ಹಾಗೂ ನಿಯ್ಯತ್ತಿನಿಂದ ಮಾಡಿದ್ದು, ಪಕ್ಷಕ್ಕೆ, ಪಕ್ಷದ ನಾಯಕರಿಗೆ ಹಾಗೂ ಕ್ಷೇತ್ರದ ಜನರಿಗೆ ಗೌರವ ಉಂಟು ಮಾಡುವ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಜನರ ಪ್ರೀತಿ-ವಿಶ್ವಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಎಷ್ಟೇ ದೊಡ್ಡ ಹುದ್ದೆ ದೊರೆತರೂ ಜನರ ಮಧ್ಯೆ ಸರಳವಾಗಿಯೇ ನಡೆದುಕೊಳ್ಳುತ್ತೇನೆ. ಯಾವುದೇ ಹುದ್ದೆಗೂ ಇದುವರೆಗೆ ಅಪೇಕ್ಷೆಪಟ್ಟವನಲ್ಲ. ಪಕ್ಷ ನೀಡುವ ಜವಾಬ್ದಾರಿ ಎಷ್ಟೇ ದೊಡ್ಡದು, ಕಠಿಣವಾಗಿದ್ದರೂ ಪ್ರಾಮಾಣಿಕತೆ, ಶ್ರದ್ದೆ ಹಾಗೂ ನಾಡಿನ ಒಳಿತಿಗಾಗಿ ಸದಾ ನಿರ್ವಹಿಸಲು ಸಿದ್ದನಿದ್ದೇನೆ ಎಂದು ಮಾಜಿ ಸಚಿವ ಖಾದರ್ ಇದೇ ವೇಳೆ ತಿಳಿಸಿದರು.
ನೂತನ ಕಾಂಗ್ರೆಸ್ ಸರಕಾರದಲ್ಲಿ ಗ್ಯಾರಂಟಿ ಘೋಷಣೆಗಳ ಅನುಷ್ಠಾನಕ್ಕೆ ನಾವು ಮೊದಲ ಆದ್ಯತೆ ನೀಡಲಿದ್ದೇವೆ. ಬಳಿಕ ಎಲ್ಲ ವರ್ಗದ ಜನರೂ ಕೂಡಾ ಕೈ-ಕೈ ಹಿಡಿದು ನಲಿದಾಡುವ ಉತ್ತಮ ವಾತಾವರರಣ ನಿರ್ಮಾಣ ಮಾಡುವತ್ತ ಗಮನಹರಿಸುತ್ತೇವೆ. ಇದುವೇ ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ. ಅಂತಹ ವಾತಾವರಣವನ್ನು ಸೃಷ್ಟಿಸುತ್ತೇವೆ ಎಂದು ಯು ಟಿ ಖಾದರ್ ಹೇಳಿದರು.
ಈ ಸಂದರ್ಭ ಪಕ್ಷ ಪ್ರಮುಖರಾದ ಚಂದ್ರಹಾಸ ಕರ್ಕೇರಾ, ಈಶ್ವರ್ ಉಳ್ಳಾಲ್, ಅಬ್ದುಲ್ ರಝಾಕ್ ಕುಕ್ಕಾಜೆ, ಸಂತೋಷ್ ಶೆಟ್ಟಿ, ಹಾಶಿರ್ ಪೆರಿಮಾರ್, ಶಮೀರ್ ಫಜೀರ್, ಅರುಣ್ ಡಿ’ಸೋಜ, ದೇವದಾಸ್ ಭಂಡಾರಿ, ನವಾಝ್ ನರಿಂಗಾನ, ಹುಸೈನ್, ಕುಂಞÂ ಮೋನು, ಮುರಳೀಧರ ಶೆಟ್ಟಿ, ಫಾರೂಕ್ ದೇರಳಕಟ್ಟೆ, ದಿನೇಶ್ ಪೂಜಾರಿ, ಮುಹಮ್ಮದ್ ಮುಕ್ಕಚ್ಚೇರಿ, ಮಲ್ಲಿಕಾ ಪಕ್ಕಳ, ಮಮತಾ ಗಟ್ಟಿ ಮೊದಲಾದವರು ಜೊತೆಗಿದ್ದರು.
0 comments:
Post a Comment