ಹೈಕಮಾಂಡ್ ಯಾವುದೇ ಹುದ್ದೆ ನೀಡಿದರೂ ನಿಭಾಯಿಸಲು ಸಿದ್ದ, ದ್ವೇಷದ ರಾಜಕಾರಣ ಅಂತ್ಯಗೊಂಡದ್ದೇ ಸಂತೋಷ : ಯು ಟಿ ಖಾದರ್ - Karavali Times ಹೈಕಮಾಂಡ್ ಯಾವುದೇ ಹುದ್ದೆ ನೀಡಿದರೂ ನಿಭಾಯಿಸಲು ಸಿದ್ದ, ದ್ವೇಷದ ರಾಜಕಾರಣ ಅಂತ್ಯಗೊಂಡದ್ದೇ ಸಂತೋಷ : ಯು ಟಿ ಖಾದರ್ - Karavali Times

728x90

16 May 2023

ಹೈಕಮಾಂಡ್ ಯಾವುದೇ ಹುದ್ದೆ ನೀಡಿದರೂ ನಿಭಾಯಿಸಲು ಸಿದ್ದ, ದ್ವೇಷದ ರಾಜಕಾರಣ ಅಂತ್ಯಗೊಂಡದ್ದೇ ಸಂತೋಷ : ಯು ಟಿ ಖಾದರ್

ರಮಾನಾಥ ರೈಗಳನ್ನು ರಾಜಕೀಯ ನಿವೃತ್ತಿ ಹೊಂದಲು ಬಿಡುವುದೇ ಇಲ್ಲ


ಮಂಗಳೂರು, ಮೇ 16, 2023 (ಕರಾವಳಿ ಟೈಮ್ಸ್) : ಈ ಬಾರಿಯ ಚುನಾವಣೆ ಸತ್ಯ-ಅಸತ್ಯ, ಪ್ರಚಾರ-ಅಪಪ್ರಚಾರ, ಜ್ಞಾನ-ಅಜ್ಞಾನಗಳ ನಡುವಿನ ಚುನಾವಣೆಯಲ್ಲಿ ರಾಜ್ಯದ ಜನ ಅಜ್ಞಾನಿಗಳಿಗೆ ಗೇಟ್ ಪಾಸ್ ನೀಡಿ ಜ್ಞಾನಿಗಳನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ಅಧಿಕಾರದ ಗದ್ದುಗೆ ನೀಡಿದ್ದಾರೆ ಎಂದು ಮಾಜಿ ಸಚಿವ, ಮಂಗಳೂರು ವಿಧಾನಸಭಾ ಕ್ಷೇತ್ರದ ನೂತನ ಚುನಾಯಿತ ಅಭ್ಯರ್ಥಿ ಯು ಟಿ ಖಾದರ್ ಹೇಳಿದರು. 

ಮಂಗಳವಾರ ಮಧ್ಯಾಹ್ನ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯ ದ್ವೇಷಪೂರಿತ, ತಾರತಮ್ಯದ ಹಾಗೂ ಜನ ವಿರೋಧಿ ಆಡಳಿತದಿಂದ ಜನ ಒಂದು ರೀತಿಯ ಒತ್ತಡದಲ್ಲಿ ಜೀವನ ನಡೆಸುತ್ತಿದ್ದರು. ಜನರಿಗೆ ಕೈ ಕಾಲು ಕಟ್ಟಿದ ಹಾಗೂ ಉಸಿರು ಗಟ್ಟಿದ ಪರಿಸ್ಥಿತಿ ರಾಜ್ಯದಲ್ಲಿತ್ತು. ಈ ಎಲ್ಲಾ ಜಂಜಾಟಗಳಿಗೆ ರಾಜ್ಯದ ಜನ ಚುನಾವಣೆಯ ಮೂಲಕ ಬಿಜೆಪಿಯನ್ನು ಒದ್ದೋಡಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಲ್ಲದೆ ಅಭಿವೃದ್ದಿ ಹಾಗೂ ನೆಮ್ಮದಿಯ ಆಡಳಿತಕ್ಕೆ ಕಾಂಗ್ರೆಸ್ ಆಡಳಿತವೇ ಬೇಕು ಎಂಬುದನ್ನು ಒಪ್ಪಿಕೊಂಡು ಮತ್ತೆ ಕಾಂಗ್ರೆಸ್ ಪಕ್ಷವನ್ನು ಬಹುಮತದ ಮೂಲಕ ಅಧಿಕಾರಕ್ಕೆ ತಂದಿದ್ದಾರೆ ಎಂದರು. 

ಉಳ್ಳಾಲ ಕ್ಷೇತ್ರದಲ್ಲಿ ಸತತವಾಗಿ 5 ಬಾರಿ ಗೆಲ್ಲಿಸಿದ ಕ್ಷೇತ್ರದ ಮತದಾರ ಪ್ರಭುಗಳಿಗೆ, ಸಹರಿಸಿದ ಧಾರ್ಮಿಕ ಮುಖಂಡರುಗಳಿಗೆ, ಪಕ್ಷದ ರಾಷ್ಟ್ರ-ರಾಜ್ಯ ಮಟ್ಟದ ನಾಯಕರಿಗೆ, ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದ ಖಾದರ್ ಮುಂದಿನ ದಿನಗಳಲ್ಲಿಯೂ ಎಲ್ಲರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. 

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವ್ಯತ್ಯಾಸ ತೋರಿಸಿಕೊಡುತ್ತೇವೆ. ಶಾಂತಿ-ಸಹೋದರತೆ, ಸೌಹಾರ್ದತೆಗೆ ನಮ್ಮ ಆದ್ಯತೆ. ಬಳಿಕ ಅಭಿವೃದ್ದಿ ರಾಜಕಾರಣ ಎಂದ ಖಾದರ್, ಹಿಂದಿನ ಸರಕಾರದ ಯೋಜನೆಗಳನ್ನು ನೂತನವಾಗಿ ಬರುವ ಸರಕಾರದ ಜವಾಬ್ದಾರಿಯಾಗಿದೆ. ಆದರೆ ಬಿಜೆಪಿ ಸರಕಾರ ಹಿಂದಿನ ಕಾಂಗ್ರೆಸ್ ಸರಕಾರ ಆರಂಭಿಸಿದ ಯೋಜನೆಗಳನ್ನು ಮುಂದುವರಿಸುವುದು ಬಿಟ್ಟು ದ್ವೇಷದ ರಾಜಕಾರಣ ಮಾತ್ರ ಮಾಡಿದ್ದರು. ಹೊಸ ಯೋಜನೆಗಳನ್ನಂತೂ ಆರಂಭಿಸಿಯೇ ಇಲ್ಲ. ಇದ್ದುದನ್ನು ನಿಲ್ಲಿಸಿ ಜನರಿಗೆ ತಲುಪಿದ್ದ ಸೌಲಭ್ಯಗಳನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪಕ್ಷದ ಹೈಕಮಾಂಡ್ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸಲು ಸಿದ್ದ ಎಂದ ಮಾಜಿ ಸಚಿವರು, ಈ ಹಿಂದೆಯೂ ಪಕ್ಷ ನೀಡಿದ ಎಲ್ಲ ಜವಾಬ್ದಾರಿಗಳನ್ನು ಸುಸೂತ್ರವಾಗಿ ನಿರ್ವಹಿಸಿದ್ದೇನೆ. ಮುಂದೆಯೂ ಅದೇ ರೀತಿ ಮಾಡುತ್ತೇನೆ ಎಂದರು. 

ಬಿಜೆಪಿ ಸರಕಾರ ಸದಾ ತಾರತಮ್ಯದ ರಾಜಕೀಯ ಮಾತ್ರ ಮಾಡಿದೆ. ಕಾಂಗ್ರೆಸ್ ಯಾವತ್ತೂ ರಾಜಕಾರಣದಲ್ಲಿ ತಾರತಮ್ಯವಾಗಲೀ, ದ್ವೇಷ ಸಾಧನೆಯನ್ನಾಗಲೀ ಮಾಡಿಲ್ಲ. ದ್ವೇಷದ ರಾಜಕಾರಣದ ಮೂಲಕ ಜನರನ್ನು ವಂಚಿಸಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯವಿಲ್ಲ. ರಾಜಕೀಯ ದ್ವೇಷ, ತಾರತಮ್ಯದಂತಹ ಸಣ್ಣತನದ, ಕೀಳುಮಟ್ಟದ ರಾಜಕೀಯ ಕಾಂಗ್ರೆಸ್ ಯಾವತ್ತೂ ಮಾಡಿಲ್ಲ, ಮಾಡುವುದೂ ಇಲ್ಲ ಎಂದ ಯು ಟಿ ಖಾದರ್, ಕೇಂದ್ರದ ಯೋಜನೆಗಳು ಅದೇನೂ ಕೇಂದ್ರ ಸರಕಾರ ನೀಡುವ ಭಿಕ್ಷೆಯಲ್ಲ, ರಾಜ್ಯದ ಜನ ಕಟ್ಟಿದ ತೆರಿಗೆ ಪಾಲು. ಅದನ್ನು ಪಡೆಯುವುದು ನಮ್ಮ ಹಕ್ಕಾಗಿದೆ. ಎಲ್ಲ ರಾಜ್ಯಗಳು ಕಟ್ಟಿದ ಟ್ಯಾಕ್ಸ್ ಪಾಲು ಹೋಗುತ್ತಿರುವುದು ಕೇವಲ ಗುಜರಾತಿಗೆ ಮಾತ್ರ. ಬಿಜೆಪಿ ಶಾಸಕರು ಮೌನವಾಗಿದ್ದರಿಂದ ಕೇಂದ್ರ ಎಲ್ಲವನ್ನೂ ಮೂಗಿನ ನೇರಕ್ಕೆ ಮಾಡಿಕೊಂಡು ಮಲತಾಯಿ ಧೋರಣೆ ಅನುಸರಿಸಿದೆ. ಆದರೆ ನಾವು ಕೇಂದ್ರದಿಂದ ದೊರೆಯಬಹುದಾದ ಎಲ್ಲ ಸವಲತ್ತುಗಳನ್ನು ನ್ಯಾಯೋಚಿತ ರೀತಿಯಲ್ಲಿ ಕೇಳಿ ಪಡೆದುಕೊಂಡು ಎಲ್ಲ ವರ್ಗವನ್ನು ವಿಶ್ವಾಸಕ್ಕೆ ಪಡೆದುಕೊಂಡು ಯಾರಿಗೂ ನೋವಾಗದಂತೆ ನ್ಯಾಯಪರ ಆಡಳಿತ ನೀಡುತ್ತೇವೆ. ಇನ್ನೊಬ್ಬರ ಕಣ್ಣೀರಿನಲ್ಲಿ ಅಧಿಕಾರ ನಡೆಸಿ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸುವ ಮೂಲಕ ದ್ವೇಷ ರಾಜಕಾರಣಕ್ಕೆ ಕಾಂಗ್ರೆಸ್ ಮಣೆ ಹಾಕುವುದಿಲ್ಲ ಎಂದು ಒತ್ತಿ ಹೇಳಿದರು. 

ನೂತನ ಕಾಂಗ್ರೆಸ್ ಸರಕಾರದಲ್ಲಿ ಗ್ಯಾರಂಟಿ ಘೋಷಣೆಗಳ ಅನುಷ್ಠಾನಕ್ಕೆ ನಾವು ಮೊದಲ ಆದ್ಯತೆ ನೀಡಲಿದ್ದೇವೆ. ಬಳಿಕ ಎಲ್ಲ ವರ್ಗದ ಜನರ ಮಕ್ಕಳೂ ಕೂಡಾ ಕೈ-ಕೈ ಹಿಡಿದು ನಲಿದಾಡುವ ಉತ್ತಮ ವಾತಾವರರಣ ನಿರ್ಮಾಣವಾಗಬೇಕು. ಇದುವೇ ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ. ಅಂತಹ ವಾತಾವರಣವನ್ನು ಸೃಷ್ಟಿಸುತ್ತೇವೆ ಎಂದ ಖಾದರ್ ಜಿಲ್ಲೆಯವರೇ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾಗಿದ್ದು ಕೂಡಾ ತುಳು ಭಾಷೆಗೆ ಬೇಕಾದ ಮಾನ್ಯತೆ ನೀಡಲು ವಿಫಲರಾಗಿರುವುದು ದೊಡ್ಡ ದುರಂತವಾಗಿದ್ದು, ನಮ್ಮ ಸರಕಾರ ಅದನ್ನು ಮಾಡಿ ತೋರಿಸುವ ಪ್ರಯತ್ನ ಮಾಡಲಿದೆ ಎಂದರು. ಬಿಜೆಪಿಯ ಮೋಸಕ್ಕೆ, ಸುಳ್ಳುಗಳಿಗೆ ಜಿಲ್ಲೆಯ ಜನ ಬಲಿಯಾಗಿರುವುದು ದೊಡ್ಡ ದುರಂತ. ಆದರೂ ಜಿಲ್ಲೆಯ ಜನ ಟೆನ್ಶನ್ ಇಲ್ಲದ ಜೀವನ ನಡೆಸಲು ಪೂರಕ ವಾತಾವರಣ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು. 

ರೈಗಳ ನಿವೃತ್ತಿಗೆ ಬಿಡುವುದಿಲ್ಲ

ರಮಾನಾಥ ರೈಗಳು ಜಿಲ್ಲೆಯ ಓರ್ವ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿದ್ದು, ಅಭಿವೃದ್ದಿ ಹಾಗೂ ರಾಜಕೀಯ ಚತುರತೆಯ ಮೂಲಕ ಜನರ ಹಿತ ಕಾಪಾಡಿದವರು. ಅವರ ರಾಜಕೀಯ ಅನುಭವ ಈ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಸದಾ ಬೇಕಾಗಿದೆ. ಅವರನ್ನು ಯಾವುದೇ ವಿಧದ ರಾಜಕೀಯದಿಂದ ನಿವೃತ್ತಿ ಹೊಂದಲು ಕ್ಷೇತ್ರದ ಜನರಾಗಲೀ, ಪಕ್ಷದ ನಾಯಕರು, ಕಾರ್ಯಕರ್ತರಾಗಲೀ ಬಿಡುವುದೇ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಖಾದರ್ ಉತ್ತರಿಸಿದರು. 

ಈ ಸಂದರ್ಭ ಪಕ್ಷ ಪ್ರಮುಖರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಕೆ ಕೆ ಶಾಹುಲ್ ಹಮೀದ್, ಸದಾಶಿವ ಉಳ್ಳಾಲ, ಕವಿತಾ ಸನಿಲ್, ಶಾಲೆಟ್ ಪಿಂಟೋ, ಟಿ ಎಸ್ ಅಬ್ದುಲ್ಲ, ಮಮತಾ ಡಿ ಎಸ್ ಗಟ್ಟಿ, ಮುಹಮ್ಮದ್ ಮೋನು, ಕು ಅಪ್ಪಿ, ನಝೀರ್ ಬಜಾಲ್ ಮೊದಲಾದವರು ಜೊತೆಗಿದ್ದರು.


  • Blogger Comments
  • Facebook Comments

0 comments:

Post a Comment

Item Reviewed: ಹೈಕಮಾಂಡ್ ಯಾವುದೇ ಹುದ್ದೆ ನೀಡಿದರೂ ನಿಭಾಯಿಸಲು ಸಿದ್ದ, ದ್ವೇಷದ ರಾಜಕಾರಣ ಅಂತ್ಯಗೊಂಡದ್ದೇ ಸಂತೋಷ : ಯು ಟಿ ಖಾದರ್ Rating: 5 Reviewed By: karavali Times
Scroll to Top