ಬೆಂಗಳೂರು, ಮೇ 20, 2023 (ಕರಾವಳಿ ಟೈಮ್ಸ್) : ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿ ಕೆ ಶಿವಕುಮಾರ್ ಅವರು ಶನಿವಾರ (ಮೇ 20) ಪ್ರಮಾಣವಚನ ಸ್ವೀಕರಿಸಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಸಿದ್ದು ಹಾಗೂ ಡಿಕೆಶಿ ಸಹಿತ 8 ಮಂದಿ ಸಚಿವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಸಿದ್ದರಾಮಯ್ಯ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಡಿಕೆ ಶಿವಕುಮಾರ್ ಅವರು ಸ್ವಾಮಿ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪಕ್ಷದ ಹಿರಿಯ ಶಾಸಕರಾದ ಡಾ ಜಿ ಪರಮೇಶ್ವರ್, ಕೆ ಎಚ್ ಮುನಿಯಪ್ಪ, ಎಂ ಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆ ಜೆ ಜಾರ್ಜ್, ಸತೀಶ್ ಜಾರಕಿಹೊಳಿ, ಝಮೀರ್ ಅಹ್ಮದ್ ಖಾನ್, ರಾಮಲಿಂಗಾ ರೆಡ್ಡಿ ಅವರು ಮೊದಲ ಪಟ್ಟಿಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಪ್ಪ, ಎಐಸಿಸಿ ಅಧಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಪುತ್ರ ಪ್ರಿಯಾಂಕ್ ಖರ್ಗೆ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ತಮಿಳುನಾಡು ಸಿಎಂ ಸ್ಟಾಲಿನ್, ನಟ ಕಮಲ್ ಹಾಸನ್, ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಜೇಂದ್ರ ಸಿಂಗ್ ಬಾಬು, ದುನಿಯಾ ವಿಜಯ್, ನಟಿ ರಮ್ಯಾ, ಭಾವನಾ, ಉಮಾಶ್ರೀ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ನೂತನ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸರಕಾರವನ್ನು ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತಂದ ರಾಜ್ಯದ ಜನತೆಗೆ ಅಭಿನಂದನೆಗಳು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ನೀಡಿದ ಎಲ್ಲಾ ಗ್ಯಾರಂಟಿ ಭರವಸೆಗಳನ್ನು ಇಂದು ನಡೆಯುವ ಮೊದಲ ಸಂಪುಟ ಸಭೆಯಲ್ಲೇ ಅನುಮೋದನೆ ಪಡೆದು ಅನುಷ್ಠಾನಗೊಳಿಸಲಾಗುವುದು. ರಾಜ್ಯದ ಎಲ್ಲ ಜನರಿಗೂ ಕಾಂಗ್ರೆಸ್ ಪಕ್ಷದ ಯೋಜನೆಗಳ ಫಲ ಲಭಿಸುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
0 comments:
Post a Comment