ಮೈಸೂರು, ಮೇ 22, 2023 (ಕರಾವಳಿ ಟೈಮ್ಸ್) : ಅಧಿಕಾರ ಹಂಚಿಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಮುಂದೆ ಯಾವುದೇ ಮಾತುಕತೆ ನಡೆದಿಲ್ಲ. ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಲಿದ್ದಾರೆ ಎಂದು ಸಿದ್ದರಾಮಯ್ಯ ಸರಕಾರ ನೂತನ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಅಲ್ಲ, 30 ತಿಂಗಳ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಅನ್ನೋ ಊಹಾಪೋಹಗಳು ರಾಜ್ಯದ ಜನರ ಮಧ್ಯೆ ಹರಿದಾಡಿತ್ತು. ಈ ಎಲ್ಲಾ ಊಹಾಪೋಹಗಳನ್ನು ಸಚಿವ ಎಂ ಬಿ ಪಾಟೀಲ್ ಸ್ಪಷ್ಟವಾಗಿ ತಿರಸ್ಕರಿಸುವ ಮೂಲಕ ಸಿದ್ದರಾಮ್ಯಯ ನೇತೃತ್ವದಲ್ಲೇ ಕೈ ಸರಕಾರ ಐದು ವರ್ಷ ಪೂರೈಸಲಿದೆ ಎಂಬ ಸೂಚನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಂ ಬಿ ಪಾಟೀಲ್, ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿದ್ದರೆ, ಡಿ ಕೆ ಶಿವಕುಮಾರ್ 5 ವರ್ಷ ಉಪ ಮುಖ್ಯಮಂತ್ರಿ ಹೊಣೆ ನಿರ್ವಹಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆ ಕುರಿತು ಎಐಸಿಸಿ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಸಿದ್ದರಾಮಯ್ಯ ಮುಂದಿನ 5 ವರ್ಷ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅಧಿಕಾರ ಹಂಚಿಕ ಮಾತೇ ಇಲ್ಲ ಎಂದು ಎಂ ಬಿ ಪಾಟೀಲ್ ಹೇಳಿದರು.
ಬಿಜೆಪಿ ಅಧಿಕಾರದಲ್ಲಿ ನಡೆದ ಹಗರಣಗಳ ತನಿಖೆ ನಡೆಸುತ್ತೇವೆ ಎಂದು ಎಂ ಬಿ ಪಾಟೀಲ್ ಇದೇ ವೇಳೆ ಹೇಳಿದ್ದಾರೆ. ಪಿ ಎಸ್ ಐ, ಹಗರಣ, ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಹಾಗೂ ಇತರೆ ಇಲಾಖೆ ಬಗ್ಗೆ ತನಿಖೆ ನಡೆಸುತ್ತೇವೆ. ತಪ್ಪತಸ್ತರಿಗೆ ಶಿಕ್ಷೆ ನೀಡಿ, ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ ಗ್ಯಾರೆಂಟಿ ಭರವಸೆಗೆ ಮೊದಲ ಕ್ಯಾಬಿನೆಟ್‍ನಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಇದರಲ್ಲಿ ಬದಲಾವಣೆ ಇಲ್ಲ ಎಂದು ಎಂ ಬಿ ಪಾಟೀಲ್ ಸ್ಪಷ್ಟಪಡಿಸಿದರು.
0 comments:
Post a Comment