ಮಂಗಳೂರು, ಮೇ 02, 2023 (ಕರಾವಳಿ ಟೈಮ್ಸ್) : ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸರಕಾರಿ ಪ್ರೌಢಶಾಲಾ ಸ್ಟಾಕ್ ರೂಮಿನಲ್ಲಿದ್ದ ಸುಮಾರು 32 ಸಾವಿರ ರೂಪಾಯಿ ಮೌಲ್ಯದ 8 ನಿರುಪಯುಕ್ತ ಬ್ಯಾಟರಿ ಕಳವು ದೂರಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಧರ್ಮಸ್ಥಳ ಠಾಣಾ ಪೊಲೀಸರು ಭಾರೀ ಯಶಸ್ಸು ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 9 ಸರಕಾರಿ ಶಾಲೆಗಳಲ್ಲಿ ನಡೆದ ಬ್ಯಾಟರಿ ಕಳವು ಪ್ರಕರಣ ಬೇಧಿಸಿದ್ದಲ್ಲದೆ 2 ಲಕ್ಷ ರೂಪಾಯಿ ಮೌಲ್ಯದ ಬ್ಯಾಟರಿ ಹಾಗೂ 1 ಲಕ್ಷ ರೂಪಾಯಿ ಮೌಲ್ಯದ ಕಳವು ಕೃತ್ಯಕ್ಕೆ ಬಳಸಿದ ಕಾರು ಸಹಿತ ನಾಲ್ಕು ಮಂದಿ ಖದೀಮರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕಡಬ ತಾಲೂಕು, ಕುಟ್ರಪಾಡಿ ಗ್ರಾಮದ ದೋಲ ನಿವಾಸಿ ಹೊನ್ನಪ್ಪ ಗೌಡ ಅವರ ಪುತ್ರ ರಕ್ಷಿತ್ ಡಿ (24), ಮೀನಾಡಿ ನಿವಾಸಿ ಧರ್ಣಪ್ಪ ಗೌಡ ಅವರ ಪುತ್ರ ತೀರ್ಥೇಶ್ ಎಂ (29), ಉರುಂಬಿ ನಿವಾಸಿ ಕುಶಾಲಪ್ಪ ಗೌಡ ಅವರ ಪುತ್ರ ಯಜ್ಞೇಶ್ ಯು ಕೆ (30) ಹಾಗೂ ಹಳ್ಳಿಮನೆ ನಿವಾಸಿ ವಿಶ್ವನಾಥ ಶೆಟ್ಟಿ ಅವರ ಪುತ್ರ ರೋಹಿತ್ ಎಚ್ ಶೆಟ್ಟಿ (23) ಎಂದು ಹೆಸರಿಸಲಾಗಿದೆ.
ಮಾರ್ಚ್ 27 ರಂದು ಸಂಜೆ 5 ಗಂಟೆಯಿಂದ 28 ರ ಬೆಳಿಗ್ಗೆ 9 ಗಂಟೆಯ ಮಧ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸರಕಾರಿ ಪ್ರೌಢಶಾಲೆಯ ಸ್ಟಾಕ್ ರೂಂ ಬಾಗಿಲನ್ನು ದೂಡಿ ತೆರೆದು ಅದರೊಳಗಿದ್ದ ಸುಮಾರು 32 ಸಾವಿರ ಮಾಲ್ಯದ 8 ನಿರುಪಯುಕ್ತ ಬ್ಯಾಟರಿಗಳನ್ನು ಕಳವುಗೈದ ಬಗ್ಗೆ ಕೊಕ್ಕಡ ಸರಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಹಲ್ಲಿಕೇರಿ ಪ್ರಭಾಕರ ನಾಯ್ಕ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ 24/2023 ಕಲಂ 457, 380 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಮಹತ್ವದ ಸಾಧನೆಗೈದಿದ್ದಾರೆ.
ಬಂಧಿತ ಆರೋಪಿಗಳು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ 4 ಸರಕಾರಿ ಶಾಲೆಗಳಿಂದ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಸರಕಾರಿ ಶಾಲೆಗಳಿಂದ, ಪುತ್ತೂರು ನಗರ, ಬಂಟ್ವಾಳ, ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ತಲಾ 1 ಸರಕಾರಿ ಶಾಲೆ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 9 ಸರಕಾರಿ ಶಾಲೆಗಳಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಬ್ಯಾಟರಿಗಳನ್ನು ಕಳವುಗೈದಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಲ್ಲದೆ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಆಲ್ಟೋ ಕಾರು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸುಮಾರು ಎರರಡೂವರೆ ಅಡಿ ಉದ್ದದ ಕಬ್ಬಿಣದ ಲಿವರ್, ಕೆಂಪು ಬಣ್ಣದ ಪ್ಲಾಸ್ಟಿಕ್ ಕವರ್ ಇರುವ ಕಟಿಂಗ್ ಪ್ಲೇಯರ್, ಮಾಸಲು ಹಳದಿ ಬಣ್ಣದ ಹಿಡಿ ಇರುವ ಸುಮಾರು 11 ಇಂಚು ಉದ್ದದ ಹಳೆಯ ಸ್ಕ್ರೂ ಡೈವರ್, ನೀಲಿ ಬಣ್ಣದ 2 ಆಕ್ಸೋ ಬ್ಲೇಡ್ ಗಳು, ಕಪ್ಪು ಬಣ್ಣದ ಗಮ್ ಟೇಫ್ ಹಾಕಿದ ಚಿಕ್ಕ ಟಾರ್ಚ್ ಲೈಟ್, ಕಪ್ಪು ಬಣ್ಣದಲ್ಲಿ ಕಂಪನಿಯ ಡಿಸೈನ್ ಇರುವ ಟೋಪಿಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡಿರುವ ಸೊತ್ತುಗಳು ಒಟ್ಟು ಅಂದಾಜು ಮೌಲ್ಯ 3 ಲಕ್ಷ ರೂಪಾಯಿಗಳು ಎಂದು ಪೊಲೀಸರು ಅಂದಾಜಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿಎಸ್ಸೈಗಳಾದ ಅನಿಲ ಕುಮಾರ ಡಿ, ಶ್ರೀಮತಿ ರೇಣುಕ ಅವರ ನೇತೃತ್ವದಲ್ಲಿ ಎಎಸ್ಸೈ ಸ್ಯಾಮುವೆಲ್, ಎಚ್ ಸಿ ಗಳಾದ ರಾಜೇಶ್, ಪ್ರಶಾಂತ, ಸತೀಶ ನಾಯ್ಕ ಜಿ, ಲಾರೆನ್ಸ್ ಪಿ ಆರ್, ಕೃಷ್ಣಪ್ಪ, ಶೇಖರ ಗೌಡ, ಮಂಜುನಾಥ, ಮಹಿಳಾ ಎಚ್ ಸಿ ಪ್ರಮೋದಿನಿ, ಪಿಸಿಗಳಾದ ಅನಿಲ್ ಕುಮಾರ್, ಜಗದೀಶ, ಹರೀಶ್, ನಾಗರಾಜ್, ಮಹಿಳಾ ಪಿಸಿ ರಾಧಾ ಕೋಟಿನ್, ವಾಹನ ಚಾಲಕ ಲೋಕೇಶ್ ಅವರುಗಳು ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment