ಬಂಟ್ವಾಳ, ಮೇ 06, 2023 (ಕರಾವಳಿ ಟೈಮ್ಸ್) : ಸಂಸ್ಕಾರ ಎಂದರೆ ಸಂಸ್ಕೃರಿಸುವುದು, ಸಂಸ್ಕಾರ ಇಲ್ಲದೇ ಯಾವುದೇ ಕಲೆಯನ್ನು ನಮ್ಮೊಳಗೆ ಅರಗಿಸಿಕೊಳ್ಳಲಾಗುವುದಿಲ್ಲ, ಸಂಸ್ಕಾರ ಸೌರಭ ಕಾರ್ಯಕ್ರಮದಲ್ಲಿ ಮಕ್ಕಳು ಸಂಸ್ಕಾರ ಶಿಕ್ಷಣದ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ರಾಧಾ ಸುರಭಿ ಗೋ ಮಂದಿರದ ಸಂಸ್ಥಾಪಕ ಭಕ್ತಿ ಭೂಷಣ ಪ್ರಭೂಜಿ ತಿಳಿಸಿದರು.
ಪುದು ಗ್ರಾಮದ ನಾಣ್ಯದ ನಾಗರಕ್ತೇಶ್ವರಿ ಕ್ಷೇತ್ರದಲ್ಲಿ ಸಂಸ್ಕಾರ ಭಾರತಿ ದ.ಕ. ಜಿಲ್ಲೆ ಇದರ ಬಂಟ್ವಾಳ ಘಟಕದ ವತಿಯಿಂದ ತ್ರೃಷಾ ಶೆಟ್ಟಿ ನಿರ್ದೇಶನದಲ್ಲಿ ನಡೆಯಲಿರುವ ಐದು ದಿನಗಳ ಸಂಸ್ಕಾರ ಸೌರಭ-ಮಕ್ಕಳ ಬೇಸಿಗೆ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಕಾರ ಭಾರತಿ ದ.ಕ. ಜಿಲ್ಲಾಧ್ಯಕ್ಷ ತಾರನಾಥ ಕೊಟ್ಟಾರಿ ಮಾತನಾಡಿ, ಸಂಘಟನೆಯ ಮೂಲ ಉದ್ದೇಶವೇ ಮಕ್ಕಳಲ್ಲಿ ನೈತಿಕತೆಯ ಜಾಗೃತಿ ಮೂಡಿಸುವುದು. ಶಾಲೆಯ ಶಿಕ್ಷಣವನ್ನು ಪಡೆದು ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ. ಅದೇ ರೀತಿ ಸಂಸ್ಕಾರ ಶಿಕ್ಷಣ ಮಾನಸಿಕತೆ ಮತ್ತು ಬೌದ್ಧಿಕತೆಯ ಬೆಳವಣಿಗೆಯನ್ನು ಮಾಡಬೇಕು. ಆ ಮೂಲಕ ಆಧಾತ್ಮಿಕತೆಯ ಬೆಳವಣಿಗೆ, ಧಾರ್ಮಿಕ ಮನೋಭಾವದ ಅಭಿವೃದ್ಧಿಯಾಗಬೇಕು ಎಂದು ತಿಳಿಸಿದರು.
ನಾಗರಕ್ತೇಶ್ವರಿ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ, ಪುದು ಪಂಚಾಯತ್ ಸದಸ್ಯ ಮನೋಜ್ ಆಚಾರ್ಯ ನಾಣ್ಯ, ಶಿಕ್ಷಕಿ ಉಮಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಮಾನಸ ಪ್ರಾರ್ಥಿಸಿದರು. ಶಿಕ್ಷಕಿ ರೇಷ್ಮಾ ವಂದಿಸಿದರು. ಪ್ರತಿಮಾ, ಚಿತ್ತರಂಜನ್ ಸಹಕರಿಸಿದರು.
ಶಿಬಿರಾರ್ಥಿಗಳಿಗೆ ಚಲನಚಿತ್ರ ನಟ ಮೈಮ್ ರಾಮ್ ದಾಸ್, ಮಿಮಿಕ್ರಿ ಕಲಾವಿದೆ ಅಕ್ಷತಾ ಕುಡ್ಲ ಮತ್ತು ಕಳಾರಿ ತರಬೇತಿದಾರ ಆರಾಧನ್ ಮತ್ತು ಆಕಾಶ್ ತರಬೇತಿ ನೀಡಿದರು.
0 comments:
Post a Comment