ರಾಜಕೀಯವಾಗಿ ದೊರೆತ ಎಲ್ಲ ಅವಕಾಶಗಳನ್ನು ಕ್ಷೇತ್ರದ ಜನರಿಗಾಗಿ ವ್ಯಯಿಸಿದ್ದೇನೆ, ಮತ್ತೆ ಆರಿಸಿ ಬಂದಲ್ಲಿ ಜನರಿಗೆ ಡಬಲ್ ಧಮಾಕಾ ನೀಡಲಿದ್ದೇನೆ : ಬಂಟ್ವಾಳ ಕೈ ಅಭ್ಯರ್ಥಿ ರಮಾನಾಥ ರೈ - Karavali Times ರಾಜಕೀಯವಾಗಿ ದೊರೆತ ಎಲ್ಲ ಅವಕಾಶಗಳನ್ನು ಕ್ಷೇತ್ರದ ಜನರಿಗಾಗಿ ವ್ಯಯಿಸಿದ್ದೇನೆ, ಮತ್ತೆ ಆರಿಸಿ ಬಂದಲ್ಲಿ ಜನರಿಗೆ ಡಬಲ್ ಧಮಾಕಾ ನೀಡಲಿದ್ದೇನೆ : ಬಂಟ್ವಾಳ ಕೈ ಅಭ್ಯರ್ಥಿ ರಮಾನಾಥ ರೈ - Karavali Times

728x90

8 May 2023

ರಾಜಕೀಯವಾಗಿ ದೊರೆತ ಎಲ್ಲ ಅವಕಾಶಗಳನ್ನು ಕ್ಷೇತ್ರದ ಜನರಿಗಾಗಿ ವ್ಯಯಿಸಿದ್ದೇನೆ, ಮತ್ತೆ ಆರಿಸಿ ಬಂದಲ್ಲಿ ಜನರಿಗೆ ಡಬಲ್ ಧಮಾಕಾ ನೀಡಲಿದ್ದೇನೆ : ಬಂಟ್ವಾಳ ಕೈ ಅಭ್ಯರ್ಥಿ ರಮಾನಾಥ ರೈ

ರಾಷ್ಟ್ರ-ರಾಜ್ಯ ನಾಯಕರ ದಂಡಿಲ್ಲ, ಸೆಲೆಬ್ರಿಟಿಗಳ ಗೌಜಿ-ಗದ್ದಲಗಳಿಲ್ಲ, ಕ್ಷೇತ್ರದ ಸಹಸ್ರ ಸಂಖ್ಯೆಯ ಕಾರ್ಯಕರ್ತರು, ಮತದಾರರಿಂದಲೇ ಅಚ್ಚುಕಟ್ಟಾಗಿ ನಡೆಯಿತು ರೈ ರೋಡ್ ಶೋ 


ಬಂಟ್ವಾಳ, ಮೇ 08, 2023 (ಕರಾವಳಿ ಟೈಮ್ಸ್) : ಸಹಕಾರಿ ಬ್ಯಾಂಕ್ ಮೂಲಕ ಜನಸೇವೆಗೆ ಪಾದಾರ್ಪಣೆ ಮಾಡಿದ ನಾನು ಸಿಕ್ಕಿದ ಸಣ್ಣ ಅವಕಾಶ ಕೂಡಾ ಸಮಾಜಕ್ಕಾಗಿ ಬಳಸಿದ್ದೇನೆ ಎಂದು ಮಾಜಿ ಸಚಿವ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ 9ನೇ ಬಾರಿಗೆ ಸ್ಪರ್ಧಿಸುತ್ತಿರುವ ಬಿ ರಮಾನಾಥ ರೈ ಹೇಳಿದರು. 

ಚುನಾವಣಾ ಬಹಿರಂಗ ಪ್ರಚಾರದ ಕೊನೆ ದಿನವಾದ ಸೋಮವಾರ ಅಪರಾಹ್ನ ಬಿ ಸಿ ರೋಡು ಮುಖ್ಯ ವೃತ್ತದಿಂದ ಆರಂಭಗೊಂಡ ಬೃಹತ್ ರೋಡ್ ಶೋ ಕಾರ್ಯಕ್ರಮದ ಬಳಿಕ ಕೈಕಂಬ ಜಂಕ್ಷನ್ನಿನಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆರು ವರ್ಷಗಳ ಕಾಲ ಕೃಷಿ ಬ್ಯಾಂಕ್ ಅಧ್ಯಕ್ಷನಾಗಿ ಸೇವೆಯ ಮೂಲಕ ದೇಶದ ಬಲಿಷ್ಠ ಜಾತ್ಯಾತೀತ ಪಕ್ಷ ಕಾಂಗ್ರೆಸ್ ಪಕ್ಷದೊಂದಿಗೆ ರಾಜಕೀಯ ಜೀವನ ಆರಂಭಿಸಿದ ನನಗೆ ಮೂವತ್ತೆರಡು ವರ್ಷದ ಯುವಕನಾಗಿದ್ದಾಗ ಪಕ್ಷ ಅವಕಾಶ ನೀಡಿದೆ. ಪ್ರಥಮ ಅವಕಾಶದಲ್ಲೇ ಜಯಗಳಿಸಿ ಬಳಿಕ ನಿರಂತರ ಜನರ ಸೇವೆ ಮಾಡಿದ್ದೇನೆ. 30 ವರ್ಷ ಶಾಸಕನಾಗಿ, 13 ವರ್ಷ ಮಂತ್ರಿ ಆಗಿ ಸೇವೆ ಸಲ್ಲಿಸಿದ ನನ್ನನ್ನು ಜಿಲ್ಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸ್ಥಿತಿಗೆ ತಲುಪಿದ ಸಂದರ್ಭ ಕೂಡಾ ನನ್ನ ಕ್ಷೇತ್ರದ ಜನ ಗೆಲ್ಲಿಸಿ ಪ್ರೀತಿ ತೋರಿದ್ದಾರೆ ಎಂದರು. 

ಜನರ ಪ್ರೀತಿಗೆ ಪೂರಕವಾಗಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಕೆಲಸ ಮಾಡಿದ್ದೇನೆ. ಮುಂದೆಯೂ ನನ್ನ ಜನಸೇವೆ ಅಭಿವೃದ್ದಿಪರ ಕಾರ್ಯಕ್ರಮ ಯಾವುದೇ ಉದಾಸೀನವಿಲ್ಲದೆ ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದ ರಮಾನಾಥ ರೈ ಕ್ಷೇತ್ರದ ಜನರನ್ನು ಎಂದಿಗೂ ನಾನು ಮರೆಯಲಾರೆ ಎಂದರು. 

ಜನ ಸೇವೆ ಜಾಸ್ತಿ ಮಾಡಿದ ಹಾಗೆಲ್ಲ ಅಪಪ್ರಚಾರವೂ ಜಾಸ್ತಿ ಆಗುತ್ತಲೇ ಇರುತ್ತದೆ. ಆದರೆ ಯಾವುದೇ ಅಪಪ್ರಚಾರ, ಅವಮಾನ, ಹೀಯಾಳಿಕೆಗೂ ನಾನು ಕಿವಿಗೊಡದೆ ಕಿವಿಗೆ ಬಟ್ಟೆ ಕಟ್ಟಿ ನನ್ನ ಜನಸೇವೆಯ ಕಾಯಕವನ್ನು ಮುಂದುವರಿಸಿದ್ದೇನೆ. ಟೀಕಿಸುವವರಿಗೆ ಕೆಲಸ ಇಲ್ಲದ ಕಾರಣಕ್ಕೆ ವಿಷಯ ಗೊತ್ತಿದ್ದರೂ ರಾಜಕೀಯ ಕಾರಣಕ್ಕೆ ಟೀಕಿಸುತ್ತಾರೆ, ಅಪಪ್ರಚಾರ ಮಾಡುತ್ತಾರೆ, ಹೀಯಾಳಿಸುತ್ತಾರೆ. ಅದು ಅವರ ಯೋಗ್ಯತೆಯಾದರೆ ನನ್ನ ಯೋಗ್ಯತೆ ಜನಸೇವೆ ಮಾಡುವುದು ಅದಕ್ಕಾಗಿ ಟೀಕೆ-ಟಪ್ಪಣಿಗೆ ಎಂದಿಗೂ ಕಿವಿಗೊಡಲಾರೆ ಎಂದರು. 

ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡುತ್ತೀರಿ ಎಂಬ ಭರವಸೆ ಖಂಡಿತ ಇದೆ. ನನ್ನ ಕ್ಷೇತ್ರದ ಕೆಲವು ಕನಸಿನ ಯೋಜನೆಗಳು ಅರ್ಧದಲ್ಲಿ ಬಾಕಿಯಾದ ಬಗ್ಗೆ ಬಹಳಷ್ಟು ಬೇಸರ ಇದೆ. ಈ ಬಾರಿ ಅವಕಾಶ ನೀಡಿದರೆ ಅದೆಲ್ಲವನ್ನೂ ಪೂರ್ಣಗೊಳಿಸುವುದರ ಜೊತೆಗೆ ಇನ್ನೂ ಅನೇಕ ವಿಶೇಷ ಕನಸುಗಳಿದ್ದು, ಅವುಗಳನ್ನೂ ಮಾಡಿ ತೋರಿಸಿ ನಿಮ್ಮ ಋಣವನ್ನು ಅಲ್ಪವಾದರೂ ತೀರಿಸಲು ಪ್ರಯತ್ನಿಸುವೆ ಎಂದರು. 

ನಾಮಪತ್ರ ಸಲ್ಲಿಕೆಯ ಸಂದರ್ಭದಿಂದ ಹಿಡಿದು ಈ ಕ್ಷಣದವರೆಗೆ ನನ್ನೊಂದಿಗೆ ಸಹಕಾರ ಮಾಡಿ ಧೈರ್ಯ ತುಂಬಿದ್ದೀರಿ. ಇದೀಗ ಯಾವುದೇ ಪ್ರಚಾರಕರಾಗಲೀ, ಭಾಷಣಗಾರರಾಗಲೀ, ರಾಜ್ಯ-ರಾಷ್ಟ್ರ ಮಟ್ಟದ ನಾಯಕರಾಗಲೀ, ಸೆಲೆಬ್ರಿಟಿಗಳಾಗಲೀ ಇಲ್ಲದೆ ಕೇವಲ ನಾನು ಮಾತ್ರ ನನ್ನ ಕ್ಷೇತ್ರದ ಮತದಾರರು, ಪಕ್ಷದ ಕಾರ್ಯಕರ್ತರೊಂದಿಗೆ ಸೇರಿಕೊಂಡು ಮಾಡಿದ ರೋಡ್ ಶೋ ಕಾರ್ಯಕ್ರಮಕ್ಕೆ ಕೇವಲ ನನ್ನೊಂದಿಗೆ ಮತ್ತೆ ಹೃದಯಸ್ಪರ್ಶಿ ಪ್ರೀತಿ ತೋರಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ. ತಮಗೆಲ್ಲರಿಗೂ ಹೃದಯ ತುಂಬಿದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದ ರಮಾನಾಥ ರೈ ಬಸವಣ್ಣನ ನಾಡಿನಲ್ಲಿ ಸಾಮಾಜಿಕ ಸಾಮರಸ್ಯ ಬಲಿಷ್ಠ ಆಗಲಿದೆ ಎಂಬ ವಿಶ್ವಾಸ ನನಗೆ ಯಾವತ್ತೂ ಇದೆ. ಈ ಬಾರಿಯ ಚುನಾವಣೆ ಅದೊಂದು ವಿಶಿಷ್ಟ ಚುನಾವಣೆ. ನನಗೆ ಮತ್ತೊಮ್ಮೆ ಅವಕಾಶ ನೀಡಿ ಬಂಟ್ವಾಳದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ವಿಜಯ ಪತಾಕೆ ಹಾರಿಸುತ್ತೀರಿ ಎಂಬ ದೃಢ ವಿಶ್ವಾಸ ನನಗಿದೆ. ಮಾತನಾಡಲು ತುಂಬಾ ಇದೆ. ಇದು ಸೂಕ್ತ ಸಮಯವಲ್ಲದ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ಮಾತನಾಡುವೆ ಎಂದರು. 

ವಿಟ್ಲ ವಿಧಾನಸಭಾ ಕ್ಷೇತ್ರ ಒಳಗೊಂಡು ಬಂಟ್ವಾಳ ವಿಧಾನಸಭಾ ಕ್ಷೇತ್ರ ಪುನರ್ ವಿಂಗಡನೆ ಆದ ಬಳಿಕ ಮತ್ತಷ್ಟು ಜನರ ಸೇವೆ ಮಾಡುವ ಅವಕಾಶ ನನ್ನ ಪಾಲಿಗೆ ದೊರೆತಿದೆ. ನನ್ನ ಪಾಲಿಗೆ ಎಷ್ಟೇ ದೊಡ್ಡ ಹುದ್ದೆ ದೊರೆತರೂ ಕ್ಷೇತ್ರದ ಜನರ ಜೊತೆಯೇ ಕಳೆದಿದ್ದೇನೆ ಹೊರತು ಬೆಂಗಳೂರಿನಲ್ಲೋ, ದೆಹಲಿಯಲ್ಲೋ ಬಿಡಾರ ಹೂಡವ ಮನಸ್ಸು ಮಾಡಿಲ್ಲ. ಬೆಂಗಳೂರಿಗೆ ಹೋದರೂ ತಕ್ಷಣ ಕ್ಷೇತ್ರಕ್ಕೆ ವಾಪಾಸು ಬಂದು ಕ್ಷೇತ್ರದ ಜನರ ಜೊತೆಯೇ ಕಳೆದಿದ್ದೇನೆ ಎಂದ ರೈ ಕ್ಷೇತ್ರದ ಮತದಾರರಿಗೆ ಅಗೌರವ, ಅವಮಾನ ಆಗುವ ಕೆಲಸ ಯಾವತ್ತೂ ಮಾಡಿಲ್ಲ. ನನಗೆ ರಾಜಕೀಯ ಅನಿವಾರ್ಯ ಎಂದು ಟೀಕಿಸುವವರಿದ್ದಾರೆ. ಆದರೆ ನನಗೆ ರಾಜಕೀಯ ಅನಿವಾರ್ಯತೆ ಯಾವತ್ತೂ ಇಲ್ಲ. ರಾಜಕೀಯ ಅನಿವಾರ್ಯವಾಗುವ ಯಾವುದೇ ವ್ಯಾಪಾರವಾಗಲೀ, ವಹಿವಾಟು ಆಗಲೀ ನಾನು ಹೊಂದಿಲ್ಲ. ಯಾವುದೇ ಇಲಾಖೆ ಅಥವಾ ಅಧಿಕಾರಿಗಳ ಕೃಪಾಕಟಾಕ್ಷವೂ ನನಗೆ ಬೇಕಿಲ್ಲ. ಭ್ರಷ್ಟ ರಾಜಕಾರಣಿ ಎಂದು ಬೆರಳು ತೋರಿಸುವ ಯಾರು ಕೂಡಾ ನನ್ನ ಕ್ಷೇತ್ರದಲ್ಲಿ ಇರುವುದಿಲ್ಲ. ನನ್ನ ರಾಜಕೀಯ ಏನಿದ್ದರೂ ನನ್ನ ಕ್ಷೇತ್ರದ ಜನರಿಗಾಗಿ ಮಾತ್ರ. ನನ್ನ ಕ್ಷೇತ್ರದ ಜನರಿಗೆ ನೋವಾದರೆ ಯಾವತ್ತೂ ನನಗೆ ನೋವಾಗುತ್ತದೆ. ಜನರಿಗೆ ಉತ್ತಮ ಆಡಳಿತ ಸಿಗುವಂತಾಗಲಿ ಎಂಬ ಅಭಿಲಾಷೆ ನನ್ನಲ್ಲಿ ಯಾವತ್ತೂ ಇದೆ. ನಾನು ನನ್ನ ಸ್ವಂತ ಬದುಕಿಗಾಗಿ ಯಾವುದನ್ನೂ ಮಾಡಿಲ್ಲ. ಇಂದಿಗೂ ಸರಳ ಜೀವನ ಮಾತ್ರ ನಾನು ಮಾಡಿದ್ದೇನೆಯೇ ಹೊರತು ಆಡಂಬರ, ವೈಭೋಗದ ಜೀವನಕ್ಕಾಗಿ ಹಾತೊರೆದಿಲ್ಲ. ನಾನು ಕೂಡಾ ಕಷ್ಟದ ಬದುಕನ್ನು ಕಂಡವ, ಆದರೂ ನಿಮ್ಮ ಕಷ್ಟ-ಸುಖಗಳಲ್ಲಿ ಸಮಾನ ಭಾಗಿಯಾಗುವೆ ಎಂದ ರಮಾನಾಥ ರೈ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ-ಭ್ರಷ್ಟಾಚಾರದ ವಿರುದ್ದ ಮುಂದಿನ ದಿನಗಳಲ್ಲಿ ನಾವೆಲ್ಲ ಒಟ್ಟಾಗಿ ಹೊರಾಟ ಮಾಡುವ ಎಂದರಲ್ಲದೆ ನಿಮ್ಮಲ್ಲಿ ನನಗೆ ಋಣ ತುಂಬಾ ಇದೆ. ಜನ್ಮದಲ್ಲಿ ಅದನ್ನು ತೀರಿಸಲು ಸಾಧ್ಯವಿಲ್ಲ ಆದರೆ ಸಾಧ್ಯವಾದಷ್ಟು ಮಟ್ಟಿಗೆ ಶಕ್ತಿ ಮೀರಿ ಪ್ರಯತ್ನ ನಡೆಸುವೆ ಎಂದು ವೇದಿಕೆಗೆ ಮುಂಭಾಗಕ್ಕೆ ರಮಾನಾಥ ರೈ ಕಾರ್ಯಕರ್ತರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.

ಇದು ನನ್ನ ಪಾಲಿನ ಕೊನೆಯ ವಿಧಾನಸಭಾ ಚುನಾವಣೆಯ ಸ್ಪರ್ಧೆಯಾಗಿದ್ದು, ಅವಕಾಶ ನೀಡಿದರೆ ಹಿಂದೆಂದಿಗಿಂತ ದುಪ್ಪಟ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು ಬಂಟ್ವಾಳ ಕ್ಷೇತ್ರವನ್ನು ಮಾದರಿಯಾಗಿ ಮಾರ್ಪಡಿಸುತ್ತೇನೆ ಎಂದ ರಮಾನಾಥ ರೈ ಕೆಲವರು ನನ್ನ ವಯಸ್ಸಿನ ಬಗ್ಗೆಯೂ ಅಪಹಾಸ್ಯ ಮಾಡುವವರಿದ್ದಾರೆ. ಆದರೆ ದೇಶದ ಪ್ರಧಾನಿಗಿಂತ ನಾನು ವಯಸ್ಸಿನಲ್ಲಿ ಸಣ್ಣವನಿದ್ದೇನೆ. ಪ್ರಧಾನಿಗಳು ರಾಜಕೀಯ ನಿವೃತ್ತಿ ಮಾಡಿದ ಮರುದಿನವೇ ನಾನು ಕೂಡಾ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಷ್ಟೆ ಅವರಿಗೆ ಉತ್ತರಿಸಬಯಸುತ್ತೇನೆ ಎಂದು ರಮಾನಾಥ ರೈ ಸವಾಲು ಹಾಕಿದರು.

ವೇದಿಕೆಯಲ್ಲಿ ರಾಜಸ್ಥಾನದ ಕಾಂಗ್ರೆಸ್ ಮುಖಂಡ ಆಬಿದ್ ಕಾಗ್ಝಿ ಉಪಸ್ಥಿತರಿದ್ದರು. ರಮಾನಾಥ ರೈ ಅವರ ಪುತ್ರಿ ಚರಿಷ್ಮಾ ಆರ್ ರೈ, ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಕ್ಷದ ಹಿರಿಯ ಮುಖಂಡರುಗಳಾದ ಹಾಜಿ ಬಿ ಎಚ್ ಖಾದರ್, ಹಾಜಿ ಉಸ್ಮಾನ್ ಎ ಕರೋಪಾಡಿ, ಪ್ರಮುಖರಾದ ಎಂ ಅಶ್ವನಿ ಕುಮಾರ್ ರೈ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ್ ಜೈನ್, ಸದಾಶಿವ ಬಂಗೇರ, ಲುಕ್ಮಾನ್ ಬಿ ಸಿ ರೋಡು, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಕೆ ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಯೂಸುಫ್ ಕರಂದಾಡಿ, ಬಿ ಎಂ ಅಬ್ಬಾಸ್ ಅಲಿ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಅಬ್ದುಲ್ ರಝಾಕ್ ಕುಕ್ಕಾಜೆ, ಪಿ ಎ ರಹೀಂ, ಮುಹಮ್ಮದ್ ಶಫಿ, ಸುರೇಶ್ ಜೋರಾ, ಶಬೀರ್ ಸಿದ್ದಕಟ್ಟೆ, ಲವೀನಾ ವಿಲ್ಮಾ ಮೊರಾಸ್, ಸುಭಾಶ್ ಚಂದ್ರ ಶೆಟ್ಟಿ ಕುಳಾಲು, ಜನಾರ್ದನ  ಚೆಂಡ್ತಿಮಾರ್, ವಾಸು ಪೂಜಾರಿ, ಜೋಸ್ಪಿನ್ ಡಿಸೋಜ, ಜೆಸಿಂತಾ ಡಿಸೋಜಾ, ಇಬ್ರಾಹಿಂ ನವಾಝ್ ಬಡಕಬೈಲ್, ಮುಹಮ್ಮದ್ ನಂದರಬೆಟ್ಟು, ಪರಮೇಶ್ವರ ಮೂಲ್ಯ, ನಾರಾಯಣ ನಾಯ್ಕ್, ಅಣ್ಣು ಖಂಡಿಗ, ಚಂದ್ರಹಾಸ್ ನಾಯ್ಕ್, ಸಂಪತ್ ಕುಮಾರ್ ಶೆಟ್ಟಿ, ಮೋಹನ್ ಶೆಟ್ಟಿ ಪಂಜಿಕಲ್ಲು, ಮೊಹಮ್ಮದ್ ನಂದಾವರ, ಪ್ರೀತಿರಾಜ್ ದ್ರಾವಿಡ, ಇಬ್ರಾಹಿಂ ಕೈಲಾರ್, ಜಗದೀಶ್ ಕೊಯಿಲ, ಪ್ರವೀಣ್ ಜಕ್ರಿಬೆಟ್ಟು, ಹಸೈನಾರ್ ಶಾಂತಿಅಂಗಡಿ, ಸುರೇಶ್ ಬಿ ನಾವೂರು, ಲೋಲಾಕ್ಷ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಕೊಡಾಜೆ ಬಾಲಕೃಷ್ಣ ಆಳ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 

ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಕಾರ್ಯಕರ್ತರಲ್ಲಿ ರೈ ಅವರು ಮಾಡಿದ ಮನವಿಗೆ ಸ್ಪಂದಿಸಿದ ಕೇವಲ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರನ್ನೊಳಗೊಂಡ ಪಕ್ಕಾ ರಮಾನಾಥ ರೈ ಅಭಿಮಾನಿಗಳೇ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದ್ದು, ರೋಡ್ ಶೋ ಬಿ ಸಿ ರೋಡು ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಆರಂಭಗೊಂಡು, ಕೈಕಂಬ ಪೆÇಳಲಿ ದ್ವಾರದವರೆಗೂ ಸಾಗಿತು. ಮೆರವಣಿಗೆಯುದ್ದಕ್ಕೂ ಟ್ರಾಫಿಕ್ ಅಡಚಣೆಯಾಗದಂತೆ ಪೊಲೀಸರ ಜೊತೆ ಕಾರ್ಯಕರ್ತರೂ ಕೈ ಜೋಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಂಡರು. 

  • Blogger Comments
  • Facebook Comments

0 comments:

Post a Comment

Item Reviewed: ರಾಜಕೀಯವಾಗಿ ದೊರೆತ ಎಲ್ಲ ಅವಕಾಶಗಳನ್ನು ಕ್ಷೇತ್ರದ ಜನರಿಗಾಗಿ ವ್ಯಯಿಸಿದ್ದೇನೆ, ಮತ್ತೆ ಆರಿಸಿ ಬಂದಲ್ಲಿ ಜನರಿಗೆ ಡಬಲ್ ಧಮಾಕಾ ನೀಡಲಿದ್ದೇನೆ : ಬಂಟ್ವಾಳ ಕೈ ಅಭ್ಯರ್ಥಿ ರಮಾನಾಥ ರೈ Rating: 5 Reviewed By: karavali Times
Scroll to Top