ಪುತ್ತೂರು, ಮೇ 17, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರಸಭಾ ವ್ಯಾಪ್ತಿಯ ಕೆ ಎಸ್ ಆರ್ ಟಿಸಿ ಬಸ್ಸು ನಿಲ್ದಾಣದ ಎದುರು ಅರಣ್ಯ ಇಲಾಖಾ ಆವರಣ ಗೋಡೆ ಬಳಿ ಸೋಮವಾರ “ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ದಾಂಜಲಿ” ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರ ವಿರುದ್ದ ಅವಹೇಳನಕಾರಿ ಬರಹ ಇದ್ದ ಬ್ಯಾನರ್ ಪ್ರದರ್ಶಿಸಿಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಒಂಬತ್ತು ಮಂದಿ ಆರೋಪಿಗಳಿಗೆ ಪೆÇಲೀಸರು ಮೂರನೇ ಹಂತದ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸರು ಹಲ್ಲೆ ನಡೆಸಿದ ಕಾರಣ ಆರೋಪಿಗಳ ದೇಹದ ಮೇಲೆ ಉಂಟಾದ ಗಾಯಗಳು ಹಾಗೂ ಆರೋಪಿಗಳು ನಡೆಯಲಾದ ಸ್ಥಿತಿಯಲ್ಲಿರುವ ಫೋಟೋ-ವೀಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ.
ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ನೀಡಿದ ದೂರಿನಂತೆ ಕಾರ್ಯಾಚರಣೆ ನಡೆಸಿದ ಪುತ್ತೂರು ಪೊಲೀಸರು ಆರೋಪಿಗಳಾದ ನರಿಮೊಗರು ನಿವಾಸಿಗಳಾದ ಅಲಂಬರ್ ಎಂಬವರ ಪುತ್ರರಾದ ವಿಶ್ವನಾಥ ಹಾಗೂ ಮಾಧವ, ಅಭಿ ಅಲಿಯಾಸ್ ಅವಿನಾಶ್ ಬಿನ್ ವೇಣುಗೋಪಾಲ್, ಶಿವರಾಮ್ ಬಿನ್ ಲಕ್ಷ್ಮಣ್, ಚೈತ್ರೇಶ್ ಬಿನ್ ಬಾಬು, ಈಶ್ವರ ಬಿನ್ ಪೂವಪ್ಪ, ನಿಶಾಂತ್ ಬಿನ್ ಪೂವಪ್ಪ, ದೀಕ್ಷಿತ್ ಬಿನ್ ಗುರುವಪ್ಪ, ಹಾಗೂ ಗುರುಪ್ರಸಾದ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ವಿಚಾರಣೆ ವೇಳೆ ಪೊಲೀಸರು ಆರೋಪಿಗಳಿಗೆ ತೀವ್ರ ತರದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಆರೋಪಿಗಳ ದೇಹದ ಮೇಲಿರುವ ಗಾಯಗಳು ಹಾಗೂ ಪೊಲೀಸರು ಆರೋಪಿಗಳನ್ನು ಕೊಂಡೊಯ್ಯುವ ಸಂದರ್ಭ ಅವರಿಗೆ ನಡೆದಾಡಲೂ ಆಗದ ರೀತಿಯಲ್ಲಿ ಹೆಜ್ಜೆ ಹಾಕುತ್ತಿರುವ ವಿಡಿಯೋ ತುಣುಕುಗಳೂ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವೈರಲ್ ಆಗಿರುವ ಚಿತ್ರದಲ್ಲಿ ಆರೋಪಿಗಳ ಮೇಲೆ ಇರುವ ಗಂಭೀರ ಗಾಯಗಳು ಪ್ರದರ್ಶಿಸಲ್ಪಟ್ಟಿದೆ.
ಬಂಧಿತರು ವಿಧಾನಸಭಾ ಚುನಾವಣೆ ವೇಳೆ ಪುತ್ತೂರಿನ ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ದವಾಗಿ ಹಾಗೂ ಪಕ್ಷೇತರ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ ಕಾರಣಕ್ಕಾಗಿ ಕೆಲ ರಾಜಕೀಯ ನಾಯಕರ ಪ್ರಭಾವದಿಂದ ಈ ರೀತಿಯಾಗಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಜಾಲತಾಣಗಳಲ್ಲಿ ಪೊಲೀಸ್ ದೌರ್ಜನ್ಯದ ಫೋಟೋ-ವೀಡಿಯೋ ವೈರಲ್ ಆಗುತ್ತಿರುವ ಬಗ್ಗೆ ಸುದ್ದಿ ಪ್ರಸಾರವಾಗುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಈ ಬಗ್ಗೆ ಸತ್ಯಾಂಶ ತಿಳಿದುಕೊಳ್ಳಲು ವಿಚಾರಣೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment