ಬಂಟ್ವಾಳ, ಮೇ 24, 2023 (ಕರಾವಳಿ ಟೈಮ್ಸ್) : ತಾಲೂಕಿನ ಮಾಣಿ ಜಂಕ್ಷನ್ನಿನಲ್ಲಿ ಯುವಕರ ಮಧ್ಯೆ ಬಡಿಗೆಯಿಂದ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತಲವಾರು ದಾಳಿ ಎಂಬ ಪ್ರಚೋದನಕಾರಿ ವರದಿಗಳು, ಸಂದೇಶಗಳು ಹರಿದಾಡುತ್ತಿರುವ ಬಗ್ಗೆ ಸ್ವತಃ ಪೊಲೀಸ್ ಇಲಾಖೆ ಹೊಡೆದಾಟದ ವೀಡಿಯೋ ತುಣುಕು ಸಂಗ್ರಹಿಸಿ ಸ್ಪಷ್ಟನೆ ನೀಡಿದೆ.
ಬುಧವಾರ ಮಾಣಿ ಜಂಕ್ಷನ್ನಿನಲ್ಲಿ ಯುವಕರು ಕ್ಷುಲ್ಲಕ ಕಾರಣಕ್ಕೆ ಕಟ್ಟಿಗೆಯಲ್ಲಿ ಹೊಡೆದಾಡಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಸಾಮಾಜಿಕ ಜಾಲತಾಣ ಮಾಧ್ಯಮಗಳು ಘಟನೆಗೆ ರಾಜಕೀಯ ಬಣ್ಣ ಹಚ್ಚಿ ವೈಭವೀಕರಿಸುವ ನಿಟ್ಟಿನಲ್ಲಿ ಸುದ್ದಿ ಪ್ರಕಟಿಸಿದ್ದು, ವೈರಲ್ ಆಗಿತ್ತು.
ಈ ಬಗ್ಗೆ ಘಟನೆಯ ವೀಡಿಯೋ ತುಣುಕು ಸಂಗ್ರಹಿಸಿ ಮಾಧ್ಯಮಗಳಿಗೆ ಸ್ವತಃ ಸ್ಪಷ್ಟೀಕರಣ ನೀಡಿದ ಜಿಲ್ಲಾ ಎಸ್ಪಿ ಡಾ ವಿಕ್ರಂ ಅಮಾಟೆ ಅವರು ಮಾಣಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಯಾವುದೇ ತಲವಾರು ದಾಳಿಯಾಗಲೀ, ಮಾರಣಾಂತಿಕ ಹಲ್ಲೆಯಾಗಲೀ ನಡೆದಿಲ್ಲ. ಅದು ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವಾಗಿದ್ದು, ಕಟ್ಟಿಗೆಯಿಂದ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ವಿಟ್ಲ ಪೊಲೀಸರ ತಂಡ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
0 comments:
Post a Comment