ದ.ಕ. ಜಿಲ್ಲೆಯಿಂದ ಸ್ಪೀಕರ್ ಹುದ್ದೆಗೆ ಏರುತ್ತಿರುವ 2ನೇ ಜನಪ್ರತಿನಿಧಿ, ಈ ಹುದ್ದೆ ಅಲಂಕರಿಸುತ್ತಿರುವ ಪ್ರಥಮ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವ್ಯಕ್ತಿ ಖಾದರ್
ಬೆಂಗಳೂರು, ಮೇ 24, 2023 (ಕರಾವಳಿ ಟೈಮ್ಸ್) : ವಿಧಾನಸಭೆ ನೂತನ ಸ್ವೀಕರ್ ಆಗಿ ಮಾಜಿ ಸಚಿವ, ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಶಾಸಕ, ವಿರೋಧ ಪಕ್ಷದ ಮಾಜಿ ಉಪನಾಯಕ ಯು ಟಿ ಖಾದರ್ ಅವರು ಸರ್ವಾನುಮತದಿಂದ ಬುಧವಾರ (ಮೇ 24) ಆಯ್ಕೆಯಾಗಿದ್ದಾರೆ.
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಶಾಸಕ ಯು ಟಿ ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಪ್ರಸ್ತಾವವನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅನುಮೋದಿಸಿದರು. ಬಿಜೆಪಿ, ಜೆಡಿಎಸ್ ಪಕ್ಷಗಳು ಈ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಗಳನ್ನು ಹೆಸರಿಸದೆ ಇದ್ದುದರಿಂದ ವಿಧಾನಸಭೆಯ 23ನೇ ಸ್ಪೀಕರ್ ಆಗಿ ಖಾದರ್ ಅವರನ್ನು ಅವಿರೋಧವಾಗಿ ಘೋಷಣೆ ಮಾಡಲಾಯಿತು.
ನೂತನ ಸಭಾಧ್ಯಕ್ಷರ ಹೆಸರನ್ನು ಹಂಗಾಮಿ ಸ್ಪೀಕರ್ ದೇಶಪಾಂಡೆ ಘೋಷಣೆ ಮಾಡಿದ ತಕ್ಷಣ ಯು ಟಿ ಖಾದರ್ ಸಭಾಧ್ಯಕ್ಷ ಕುರ್ಚಿಯಲ್ಲಿ ಆಸೀನರಾದರು. ಬಳಿಕ ಸಿ ಎಂ ಸಿದ್ದರಾಮಯ್ಯ ಸಹಿತ ಎಲ್ಲಾ ನಾಯಕರು ಖಾದರ್ ಅವರನ್ನು ಅಭಿನಂದಿಸಿ ಮಾತನಾಡಿದರು.
ಖಾದರ್ ಅವರಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಖಾದರ್ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಸ್ಪೀಕರ್ ಯು ಟಿ ಖಾದರ್ ಅವರಿಗೆ ಅತಿ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಸದನವೀರ ಪ್ರಶಸ್ತಿಯೂ ಸಿಕ್ಕಿತ್ತು. ವಿಪಕ್ಷ ಉಪನಾಯಕರಾಗಿಯೂ ಖಾದರ್ ಉತ್ತಮ ಕೆಲಸ ಮಾಡಿದ್ದಾರೆ. ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ. ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ನಾಡಿನ ಅಭಿವೃದ್ಧಿ, 7 ಕೋಟಿ ಕನ್ನಡಿಗರ ಹಿತರಕ್ಷಣೆ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಸ್ಥಾನ ಅತ್ಯುನ್ನತವಾದುದು. ರಾಜ್ಯದ ಜಿಡಿಪಿ ಬೆಳವಣಿಗೆ ಕೂಡ ಆಗಬೇಕು ಎಂದವರು ಹೇಳಿದರು.
ವಿಧಾನಸಭೆಯಲ್ಲಿ ಆರೋಗ್ಯಪೂರ್ಣ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೂಡಿದ ಚರ್ಚೆಗಳಾಗುವ ಮೇಲ್ಪಂಕ್ತಿಯನ್ನು ಎತ್ತಿಹಿಡಿದುವ ಜವಾಬ್ದಾರಿ ಸಭಾಧ್ಯಕ್ಷರ ಮೇಲಿದೆ. ಸದನದ ಘನತೆ, ಗಾಂಭೀರ್ಯ, ಗೌರವವನ್ನು ಸ್ಪೀಕರ್ ಎತ್ತಿಹಿಡಿಯಬೇಕು. ಖಾದರ್ ಅವರ ಮುಂದಾಳ್ವತ್ವದಲ್ಲಿ ಸದನದ ಚರ್ಚೆ ಮೇಲ್ಮಟ್ಟಕ್ಕೇರಲಿ ಎಂದು ಆಶಿಸುತ್ತೇನೆ ಎಂದ ಸಿದ್ದರಾಮಯ್ಯ ಖಾದರ್ ಅವರು ಸಭಾದ್ಯಕ್ಷರ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ನಂಬಿಕೆ ವಿಶ್ವಾಸವಿದೆ. ಅವರು ಬಹಳ ತಾಳ್ಮೆ ಇರುವ ವ್ಯಕ್ತಿ. ಅದು ಈ ಹುದ್ದೆಗೆ ಅಗತ್ಯವಾದ ಗುಣ. ಸದನದಲ್ಲಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಚರ್ಚೆಗಳಾಗಲಿ. ಹೊಸದಾಗಿ ಆರಿಸಿ ಬಂದ ಸದಸ್ಯರಿಗೆ ಅಭಿನಂದನೆಗಳು. ಸರಕಾರವಾಗಿ ತಮಗೆ ನಾವು ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇವೆ.
ರಾಜಕಾರಣದ ಕುಟುಂಬದಿಂದ ಬಂದಿರುವ ಖಾದರ್ ಅವರು ತಮ್ಮ ತಂದೆಯ ನಿಧನದ ನಂತರ ಉಳ್ಳಾಲ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಅತ್ಯಂತ ಉತ್ಸಾಹಿ, ಸಕ್ರಿಯ ರಾಜಕಾರಣಿಯಾದ ಖಾದರ್ ಅವರು ಶಾಸಕರಾಗಿ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿದ್ದು, 2018ರಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ “ಸದನವೀರ” ಪ್ರಶಸ್ತಿಯೂ ಖಾದರ್ ಅವರಿಗೆ ದೊರೆತಿತ್ತು.
ಯು ಟಿ ಖಾದರ್ ಅವರು ಮಾದರಿ ಶಾಕಸರಾಗಿ ಕೆಲಸ ಮಾಡಿದ್ದು, ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ವಿರೋಧಪಕ್ಷದ ಉಪನಾಯಕರಾಗಿ ಪರಿಣಾಮಕಾರಿಯಾಗಿ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಜಾತ್ಯಾತೀತ ಮನೋಭಾವ ಉಳ್ಳವರು ಕೂಡ ಎಂದ ಸಿಎಂ ಸಿದ್ದರಾಮಯ್ಯ ಸಭಾಧ್ಯಕ್ಷರಾದವರು ಪಕ್ಷಾತೀತವಾಗಿ ಕೆಲಸ ಮಾಡಬೇಕೆಂದು ಎಲ್ಲ ಸದಸ್ಯರೂ ಬಯಸುತ್ತಾರೆ. ವಿಧಾನಸಭೆಯಲ್ಲಿ ಈ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಇತ್ತೀಚಿನ ದಿನಗಳಲ್ಲಿ ವಿಧಾನಸಭೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಭಾವನೆ ಅನೇಕರಲ್ಲಿದೆ. ಆ ಭಾವನೆ ಹೋಗಲಾಡಿಸುವ ಕೆಲಸವನ್ನು ಮಾಡಬೇಕಿದೆ. ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ. ಇಲ್ಲಿ ಏಳು ಕೊಟಿ ಕನ್ನಡಿಗರ ಸಮಸ್ಯೆಗಳನ್ನು ಚರ್ಚೆ ಮಾಡಬೇಕು ಎಂದರು.
ಸದನದ ಅಧ್ಯಕ್ಷರಿಗೆ ಪ್ರಜಾಪ್ರಭುತ್ವದಲ್ಲಿ ಮಹತ್ವದ ಸ್ಥಾನವಿದೆ. ಸದನದ ಚರ್ಚೆಯಲ್ಲಿ ಅನೇಕ ವಿಚಾರಗಳು ಬರುತ್ತವೆ. ಚರ್ಚೆಯಲ್ಲಿ ಭಾಗವಹಿಸುವಾಗ ಪದ ಬಳಕೆಯಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಅಸಂವಿಧಾನಾತ್ಮಕ ಪದಬಳಕೆಗೆ ಅವಕಾಶವಿರಬಾರದು. ರಚನಾತ್ಮಾಕವಾದ ಸಲಹೆಗಳನ್ನು ನೀಡಲು ಅವಕಾಶ ಹಾಗೂ ಹಕ್ಕುಗಳಿವೆ. ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಬೆಳವಣಿಗೆ ಒಂದಕ್ಕೊಂದು ಪೂರಕ. ವಿಧಾನಸಭೆಗೆ ಬಂದ ಮೇಲೆ ರಾಜ್ಯದ ಅಭಿವೃದ್ಧಿ, ಜನರ ರಕ್ಷಣೆ, ಕಾನೂನು ಸುವ್ಯವಸ್ಥೆ ಇರಬೇಕು. ಕಾನೂನು ಸುವ್ಯವಸ್ಥೆ ಇಲ್ಲದಿದ್ದರೆ ಬಂಡವಾಳ ಹೂಡಿಕೆಯಾಗುವುದಿಲ್ಲ. ಬಂಡವಾಳ ಹೂಡಿಕೆಯಾಗದಿದ್ದರೆ, ಉದ್ಯೋಗ ಸೃಷ್ಟಿಯಾಗುವುದಿಲ್ಲ. ಉದ್ಯೋಗ ಸೃಷ್ಟಿಯಾಗದಿದ್ದರೆ ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ರಾಜ್ಯದ ಅಭಿವೃದ್ಧಿ, ಜಿಡಿಪಿ ಬೆಳವಣಿಗೆಯೂ ಆಗುವುದಿಲ್ಲ. ಆದ್ದರಿಂದ ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಬೆಳವಣಿಗೆ ಒಂದಕ್ಕೊಂದು ಪೂರಕವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬಳಿಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಸ್ಪೀಕರ್ ಖಾದರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇ ಆದ ಇತಿಹಾಸವಿದೆ. ಇಡೀ ದೇಶಕ್ಕೆ ಮಾರ್ಗದರ್ಶನ ನೀಡಿದ ವಿಧಾನ ಮಂಡಲವಿದು. ಯು ಟಿ ಖಾದರ್ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ವಿಪಕ್ಷ ಉಪನಾಯಕರಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ. ಈ ಹಿಂದೆ ಸ್ಪೀಕರ್‍ಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ನ್ಯಾಯಾಂಗಕ್ಕಿಂತ ಎತ್ತರವಾದದ್ದು ಸ್ಪೀಕರ್ ಸ್ಥಾನ. ನಿಷ್ಪಕ್ಷಪಾತವಾಗಿ ತಾವು ಸದನವನ್ನು ನಡೆಸಬೇಕು. ವಿಪಕ್ಷ ಸದಸ್ಯರ ಹೇಳಿಕೆಗೆ ಸ್ಪೀಕರ್ ಹೆಚ್ಚು ಅವಕಾಶ ಕೊಡಬೇಕು. ಚರ್ಚೆ ವೇಳೆ ಕೊನೆಯ ಸಾಲಿನವರಿಗೆ ಹೆಚ್ಚು ಅವಕಾಶ ಕೊಡಬೇಕು. ಸ್ಪೀಕರ್ ಹೊಸ ವಿಚಾರಕ್ಕೆ ಅವಕಾಶ ಮಾಡಿಕೊಡುವ ವಿಶ್ವಾಸವಿದೆ. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ ಎಂದು ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲೆಯಿಂದ ಸಭಾಧ್ಯಕ್ಷರಾದ ಎರಡನೇ ಜನಪ್ರತಿನಿಧಿ ಖಾದರ್ ಆಗಿದ್ದಾರೆ. ಅದೇ ರೀತಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಿಂದ ಈ ಹುದ್ದೆಗೆ ಏರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಖಾದರ್ ಪಾತ್ರರಾಗಿದ್ದಾರೆ. ಈ ಹಿಂದೆ ಬೆಳ್ತಂಗಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ ವೈಕುಂಠ ಬಾಳಿಗಾ ಎರಡು ಬಾರಿ (1962, 1967) ಸಭಾಧ್ಯಕ್ಷರಾಗಿದ್ದರು.
0 comments:
Post a Comment