ಜನರ ಹೃದಯ ಗೆಲ್ಲುವಲ್ಲಿ ಸಫಲರಾಗಿರುವ ರೈ ಅವರಿಗೆ 30 ಸಾವಿರಕ್ಕೂ ಅಧಿಕ ಮತಗಳ ಗೆಲುವು ನಿಶ್ಚಿತ
ಬಂಟ್ವಾಳ, ಮೇ 08, 2023 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೇರಿದ ತಕ್ಷಣ ಪಕ್ಷದ ನಾಯಕರು ಜನರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡದಿದ್ದಲ್ಲಿ ಮುಂದಿನ 11 ತಿಂಗಳ ಅಂತರದಲ್ಲಿ ಎದುರಾಗುವ ಲೋಕಸಭೆ ಸಹಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಯಾವುದೇ ಚುನಾವಣೆಗೂ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಯಾಚನೆಗೆ ತಮ್ಮ ಮನೆ ಬಾಗಿಲಿಗೆ ಬರುವುದೇ ಇಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯ, ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಭರವಸೆ ನೀಡಿದ್ದಾರೆ.
ಪತ್ರಿಕೆ ಜೊತೆ ಮಾತನಾಡಿದ ಅವರು ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಉಂಟಾಗಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ, ಜಿಎಸ್‍ಟಿ ಮೊದಲಾದ ಅವೈಜ್ಞಾನಿಕ ನೀತಿಯಿಂದಾಗಿ ರಾಜ್ಯದ ಜನ ದೈನಂದಿನ ಬದುಕು ಸಾಗಿಸಲಾಗದೆ ಕಂಗಾಲಾಗಿದ್ದಾರೆ. ರಸ್ತೆ, ಅಭಿವೃದ್ದಿ ಇದೆಲ್ಲವೂ ಸಾರ್ವಜನಿಕ ಒಳಿತಿನ ಕಾರ್ಯಗಳಾಗಿದ್ದು, ಅದು ನಿತ್ಯ ನಿರಂತರವಾಗಿದೆ. ಮೊದಲು ಜನರ ದೈನಂದಿನ ಬದುಕು ಸುಲಲಿತವಾಗಿ ಸಾಗಬೇಕು. ಜನರ ಬದುಕಿನ ಕಷ್ಟವನ್ನು ಅರಿತುಕೊಂಡ ಕಾಂಗ್ರೆಸ್ ಪಕ್ಷ 200 ಯುನಿಟ್ ವಿದ್ಯುತ್ ಉಚಿತ, ಮನೆ ಯಜಮಾನಿಗೆ ಮಾಸಿಕ 2 ಸಾವಿರ ಸಹಾಯಧನ, ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಮಾಸಿಕ 3 ಸಾವಿರ ಹಾಗೂ ಒಂದೂವರೆ ಸಾವಿರ ನಿರುದ್ಯೋಗ ಭತ್ಯೆ, 10 ಕೆಜಿ ಅಕ್ಕಿ ಉಚಿತ, ಉದ್ಯೋಗ, ಶೈಕ್ಷಣಿಕ ಉದ್ದೇಶಕ್ಕಾಗಿ ಹೋಗಿ ಬರುವ ಮಹಿಳೆಯರು ಸಹಿತ ಅಗತ್ಯ ಕಾರ್ಯಗಳಿಗೆ ನಿತ್ಯ ಬಸ್ ಸಂಚಾರ ಮಾಡುವ ಮಹಿಳೆಯರೆಲ್ಲರಿಗೂ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಇದೆಲ್ಲವೂ ಪ್ರತಿಯೊಬ್ಬ ವ್ಯಕ್ತಿಗೂ ವೈಯುಕ್ತಿಕವಾಗಿ ದೊರೆಯುವ ಸೌಲಭ್ಯಗಳಾಗಿದ್ದು, ಇದರಿಂದ ಜನರ ನಿತ್ಯದ ಬದುಕು ಸುಲಲಿತ, ಸಂತೋಷ ಹಾಗೂ ನೆಮ್ಮದಿಯನ್ನು ತರಲಿದೆ. ವೈಯುಕ್ತಿಕ ಬದುಕಿನಲ್ಲಿ ನೆಮ್ಮದಿ ಉಂಟಾದಾಗ ವ್ಯಕ್ತಿ ಸಹಜವಾಗಿಯೇ ಸಮಾಜಕ್ಕಾಗಿ, ಸಮುದಾಯಕ್ಕಾಗಿ, ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸಲು ತಯಾರಾಗುತ್ತಾನೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ರಾಜ್ಯದ ಸರ್ವ ಜನರ ಹಿತದೃಷ್ಟಿಯಿಂದ ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಇದೆಲ್ಲವೂ ಜಾರಿಯಾಗಲಿದೆ ಎಂದು ಭರವಸೆಯಿತ್ತರು.
ಬಿಜೆಪಿ ಜನರನ್ನು ಕೇವಲ ಧರ್ಮದ ಅಮಲಿನಲ್ಲಿ, ಭಾವನಾತ್ಮಕ ವಿಷಯಗಳನ್ನು ಮಾತ್ರ ಮುಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆಯೇ ಹೊರತು ಜನರ ದೈನಂದಿನ ಬದುಕಿಗಾಗಿ ಇದುವರೆಗೂ ಯಾವುದೇ ಯೋಜನೆ, ಕಾರ್ಯಕ್ರಮಗಳನ್ನೂ ರೂಪಿಸಿಲ್ಲ. ಅಧಿಕಾರಕ್ಕೇರುವ ಸಂದರ್ಭ ಜನತೆಗೆ ನೀಡಿದ ಭರವಸೆಗಳನ್ನಾದರೂ ಈಡೇರಿಸಿದೆಯೇ ಎಂದಾಗ ಅದೂ ಇಲ್ಲ. ಜನರಿಗೆ ಬದುಕುವ ಸನ್ನಿವೇಶವೇ ಇಲ್ಲದಾದಾಗ ಉಳಿದೆಲ್ಲವೂ ಗೌಣವಾಗುತ್ತಿದೆ. ಈ ನಿಟ್ಟಿನಲ್ಲಿ ಜನ ಬದುಕುವ ಹಕ್ಕಿಗಾಗಿ ಈ ಬಾರಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ರಮಾನಾಥ ರೈ ಅವರು ಯಾವುದೇ ಅಬ್ಬರ, ಆಡಂಬರಕ್ಕೆ ಬೆಲೆ ನೀಡದೆ ನೇರವಾಗಿ ಜನರ ಕಾಲಬುಡಕ್ಕೆ ತೆರಳಿ ಜನರ ಹೃದಯ ಗೆಲ್ಲುವ ಕೆಲಸ ಮಾಡಿದ್ದಾರೆ. ಅಧಿಕಾರ ಇಲ್ಲದಿದ್ದರೂ ಪ್ರತಿ ದಿನವೂ ಮುಂಜಾನೆಯಿಂದ ಮಧ್ಯರಾತ್ರಿವರೆಗೂ ನಿರಂತರ ಜನರ ಮಧ್ಯೆ ಇದ್ದು ಜನರ ಕಷ್ಟ-ಸುಖಗಳಲ್ಲಿ ಸಮಾನ ಭಾಗಿಗಳಾಗಿ ತಾನೊಬ್ಬ ನಿಜವಾದ ಸಾಮಾಜಿಕ ಬದುಕಿನಲ್ಲಿ ಜನಸೇವಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಧಿಕಾರ ಇದ್ದಾಗ ಅಥವಾ ಚುನಾವಣಾ ವರ್ಷದಲ್ಲಿ ವೈಯುಕ್ತಿಕ ಸ್ವಾರ್ಥಕ್ಕಾಗಿ ಜನರ ಸೇವೆ ಮಾಡುವ ನಾಟಕ ಮಾಡುವುದು ಸಹಜ ಪ್ರಕ್ರಿಯೆ. ಆದರೆ ರಮಾನಾಥ ರೈ ಅವರು ಇದಕ್ಕೆ ಭಿನ್ನವಾಗಿದ್ದು, ಅವರು ಅಧಿಕಾರ ರಹಿತರಾದರೂ ಅಧಿಕಾರದಲ್ಲಿರುವ ಸಂದರ್ಭ ಮಾಡಿದ ಸೇವೆಯಷ್ಟೆ ಪ್ರಮಾಣದಲ್ಲಿ ಈಗಲೂ ಜನಸೇವೆ ಮಾಡುವ ಮೂಲಕ ಕ್ಷೇತ್ರದ ಜನರ ಹರದಯ ಗೆದ್ದಿದ್ದಾರೆ. ಈ ನಿಟ್ಟಿನಲ್ಲಿ ಜನರ ಪೂರ್ಣ ಆಶೀರ್ವಾದ ಈ ಬಾರಿ ಅವರಿಗೆ ದೊರೆಯಲಿದ್ದು, ಸುಮಾರು 30 ಸಾವಿರಕ್ಕೂ ಅಧಿಕ ಮತಗಳ ವಿಜಯವನ್ನು ದಾಖಲಿಸಿ ಇತಿಹಾಸ ನಿರ್ಮಿಸಲಿದ್ದಾರೆ ಎಂದ ಪಿಯೂಸ್ ಎಲ್ ರೋಡ್ರಿಗಸ್ ರಮಾನಾಥ ರೈ ಅವರ ಬಹಿರಂಗ ಪ್ರಚಾರದ ಅಂತಿಮ ದಿನದ ರೋಡ್ ಶೋ ಕಾರ್ಯಕ್ರಮಕ್ಕೆ ಯಾವುದೇ ಸೆಲೆಬ್ರಿಟಿಗಳಾಗಲೀ, ಜನಪ್ರಿಯ ನಾಯಕರ ಅಬ್ಬರವಿಲ್ಲದೆ ಕೇವಲ ಜನಸೇವಕನ ನೆಲೆಯಲ್ಲಿ ಕಾರ್ಯಕರ್ತರನ್ನು ಹಾಗೂ ಮತದಾರರನ್ನು ಮಾತ್ರ ಆಹ್ವಾನಿಸಿ ನಡೆಸಿದ್ದು, ಜನ ತೋರಿದ ಪ್ರತಿಕ್ರಿಯೆಯೇ ಅವರ ಗೆಲುವಿನ ಪೂರ್ವಸೂಚನೆ ಎಂದು ವಿಶ್ಲೇಷಿಸಿದರು.
0 comments:
Post a Comment