ದೇಶದಲ್ಲೇ ಅಪರೂಪದ ರಾಜಕಾರಣಿ ರಮಾನಾಥ ರೈ ಅಂತಹವರನ್ನು ಕಳೆದುಕೊಳ್ಳದಿರಿ : ಭಾವುಕರಾಗಿ ಮನವಿ ಮಾಡಿಕೊಂಡ ಹಿರಿಯ ರಾಜಕೀಯ ಮುತ್ಸದ್ದಿ
ಬಂಟ್ವಾಳ, ಮೇ 07, 2023 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಪಕ್ಷಕ್ಕಾಗಿ, ನಾಡಿನ ಜನರಿಗಾಗಿ ನಾನು ಅರ್ಧ ಶತಮಾನಗಳಷ್ಟು ಕಾಲ ಶ್ರಮಪಟ್ಟಿದ್ದೇನೆ. ಆದರೆ ಇದೀಗ ವೃದ್ದಾಪ್ಯ ಕಾರಣದಿಂದ ನಿಮ್ಮೆಲ್ಲರ ಮನೆ ಮನೆಗೆ ಬಂದು ಮತಯಾಚಿಸಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಇವತ್ತು ಮಾಧ್ಯಮಗಳ ಮೂಲಕ ಜನರಲ್ಲಿ ಮನವಿ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸಮಾಜದ ಒಳಿತಿಗಾಗಿ ತಮ್ಮ ಅಮೂಲ್ಯ ಮತ ನೀಡಿ ಗೆಲ್ಲಿಸಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತಿದ್ದೇನೆ. ನನ್ನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ಜನರ ಬಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಜನ ದಯವಿಟ್ಟು ನನ್ನನ್ನು ಕ್ಷಮಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ರಾಜಕೀಯ ಮುತ್ಸದ್ದಿ, ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಮನವಿ ಮಾಡಿದರು.
ಭಾನುವಾರ (ಮೇ 7) ಬೆಳಿಗ್ಗೆ ತಮ್ಮ ನಿವಾಸದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ರಮಾನಾಥ ರೈ ಅವರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಮಾನಾಥ ರೈ ಅವರು ಓರ್ವ ಅಪರೂಪದ ರಾಜಕಾರಣಿ. ಅವರಿಗೆ ಈ ಕ್ಷೇತ್ರದ ಜನ ಈ ಹಿಂದೆಯೂ ಸಂಪೂರ್ಣ ಬೆಂಬಲ ಕೊಟ್ಟಿದ್ದೀರಿ. ಅದನ್ನು ಅವರು ಎಂದಿಗೂ ಮರೆಯಲಿಲ್ಲ. ನಿಮಗಾಗಿ ಅವರು ಜೀವನದ ಬಹಪಾಲು ಸಮಯವನ್ನು ಮೀಸಲಿಟ್ಟು ಕೆಲಸ ಮಾಡಿದ್ದಾರೆ. ಈಗಲೂ ಜನತೆಗಾಗಿ ಕೆಲಸ ಮಾಡುತ್ತಿದ್ದಾರೆ. ಮಧ್ಯ ರಾತ್ರಿ ವೇಳೆಯೂ ಯಾರದೇ ಅಂಜಿಕೆಯೂ ಇಲ್ಲದೆ ಕಾಂಗ್ರೆಸ್ ಪಕ್ಷಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಜನ ಸೇವೆ ಮಾಡುತ್ತಿದ್ದಾರೆ. ಅವರನ್ನು ತಮ್ಮ ಅಮೂಲ್ಯ ಮತ ನೀಡಿ ಈ ಬಾರಿ ಮತ್ತೆ ಗೆಲ್ಲಿಸಿ ಎಂದು ಜನಾರ್ದನ ಪೂಜಾರಿ ಮನವಿ ಮಾಡಿದರು.
ಜನರಿಗಾಗಿ ಕೆಲಸ ಮಾಡುವ ರಮಾನಾಥ ರೈ ಅವರನ್ನು ನೀವು ಮರೆಯಬಾರದು. ಅವರ ಮಾಡಿದ ಕೆಲಸಕ್ಕೆ ಬೆಲೆ ಇದೆ ಎಂದು ನೀವು ತೋರಿಸಿಕೊಡ್ತೀರಿ ಎಂದೇ ಭಾವಿಸುತ್ತೇನೆ. ದೇಶಾದ್ಯಂತ ಸಂಚರಿಸಿ ನಾನು ರಾಜಕಾರಣ ಮಾಡಿದ್ದೇನೆ. ರಮಾನಾಥ ರೈ ಅವರಂತ ವ್ಯಕ್ತಿತ್ವ ದೇಶದ ರಾಜಕಾರಣದಲ್ಲೇ ಬಹಳ ಅಪರೂಪ. ಅವರಂತಹ ರಾಜಕಾರಣಿಗಳು ದೇಶಕ್ಕೆ ಅತೀ ಅಗತ್ಯವಾಗಿ ಬೇಕಾಗಿದ್ದಾರೆ ಎಂಬುನ್ನು ಕ್ಷೇತ್ರ ಜನ ಯಾವತ್ತೂ ಮರೆಯಬಾರದು. ಅವರನ್ನು ಮತ ನೀಡಿ ಗೆಲ್ಲಿಸಿ ಎಂದು ಜನರಿಗೆ ಕೈಮುಗಿದು ಬೇಡುತ್ತೇನೆ. ಅವರು ನಿಮ್ಮನ್ನು ಮರೆಯುವ ವ್ಯಕ್ತಿಯೇ ಅಲ್ಲ ಎಂದು ಪಾದಯಾತ್ರೆ ಮೂಲಕ ಚುನಾವಣಾ ಸಂದರ್ಭ ಪ್ರತೀ ಬಾರಿಯೂ ಗಮನ ಸೆಳೆಯುತ್ತಿದ್ದ ಮಾಜಿ ಮಂತ್ರಿ ಜನಾರ್ದನ ಪೂಜಾರಿ ಮನವಿ ಮಾಡಿದರು.
ರಮಾನಾಥ ರೈ ಅವರಿಗೆ ಮೋಸ-ವಂಚನೆ ತಿಳಿದಿಲ್ಲ. ಸುಳ್ಳು ಹೇಳಲು ಬರೋದೇ ಇಲ್ಲ. ಹೀಗಾಗಿ ರಾಜಕೀಯದಲ್ಲಿ ಕೆಲವೊಮ್ಮೆ ಕ್ಷಣಿಕ ಹಿನ್ನಡೆ ಸಹಜ. ಆದರೆ ಅದೆಲ್ಲವೂ ತಾತ್ಕಾಲಿಕವಾಗಿದ್ದು, ಸತ್ಯವಂತರಿಗೆ ಶಾಶ್ವತ ಜಯ, ಮುನ್ನಡೆ ಇದ್ದೇ ಇದೆ. ಏನೇ ಆದರೂ ಸತ್ಯವನ್ನೇ ಹೇಳಿರಿ. ಮುಂದಿನ ದಿನಗಳಲ್ಲೂ ಸತ್ಯವನ್ನೇ ಹೇಳಿ ಜನರ ಸೇವೆ ಮಾಡಲು ಭಗವಂತ ಕರುಣಿಸಲಿ ಎಂದು ಇದೇ ವೇಳೆ ಜನಾರ್ದ ಪೂಜಾರಿ ಹಾರೈಸಿದರು.
ರಮಾನಾಥ ರೈ ಅವರಂತಹ ರಾಜಕಾರಣಿಗಳು ಸೋತರೆ ಆ ದಿನ ನಾನು ಸತ್ತಂತೆ ಎಂದು ತೀವ್ರ ಭಾವುಕರಾದ ಪೂಜಾರಿ ಅವರು ನನ್ನ ಆರೋಗ್ಯ ಒಂದಷ್ಟು ಉತ್ತಮವಾಗಿದ್ದರೆ ನಿಜವಾಗಿಯೂ ಕಾಂಗ್ರೆಸ್ ಪಕ್ಷಕ್ಕಾಗಿ ಪಾದಯಾತ್ರೆ ನಡೆಸುತ್ತಿದೆ. ನಿಮ್ಮ ಕಾಲಬುಡಕ್ಕೆ ಬಂದು ಮತಯಾಚನೆ ನಡೆಸುತ್ತಿದ್ದೆ. ಆದರೂ ಯಾವುದಾದರೂ ಒಂದು ಕ್ಷಣ ರಮಾನಾಥ ರೈ ಅವರ ಪರವಾಗಿ ಪ್ರಚಾರಕ್ಕೆ ಬಂದೇ ಬರುತ್ತೇನೆ ಎಂದು ಅನಾರೋಗ್ಯದ ನಡುವೆಯೂ ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ರಮಾನಾಥ ರೈ ಅವರು, ಜನಾರ್ದನ ಪೂಜಾರಿ ಅವರನ್ನು ಸತತ ದಿನಗಳಲ್ಲಿ ನಾನು ಭೇಟಿ ಮಾಡಿ ಆರೋಗ್ಯ ವಿಚಾರಿಸುತ್ತಿದ್ದೇನೆ. ಭಗವಂತನ ಅಪಾರ ಅನುಗ್ರಹದಿಂದ ಅವರ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆ ಕಂಡು ಬರುತ್ತಿದ್ದು, ಇದು ಬಹಳಷ್ಟು ಸಂತೋಷ ಉಂಟುಮಾಡುತ್ತಿದೆ. ಸರ್ವಶಕ್ತನಾದ ದೇವರು ಅವರಿಗೆ ದೀರ್ಘಾಯುಷ್ಯ, ಆಯುರಾರೋಗ್ಯ ಕರುಣಿಸಲಿ ಎಂದು ಹಾರೈಸಿದರು.
ಈ ಸಂದರ್ಭ ಕಾಂಗ್ರೆಸ್ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಬಿ ಕುಂದರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷತೆ ಜಯಂತಿ ವಿ ಪೂಜಾರಿ, ದ ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಬೀರ್ ಸಿದ್ದಕಟ್ಟೆ, ಬಂಟ್ವಾಳ ಪುರಸಭಾ ಸದಸ್ಯ ಬಿ ವಾಸು ಪೂಜಾರಿ ಮೊದಲಾದವರು ಜೊತೆಗಿದ್ದರು.
0 comments:
Post a Comment