ಬಂಟ್ವಾಳ, ಮೇ 08, 2023 (ಕರಾವಳಿ ಟೈಮ್ಸ್) : ಈ ಬಾರಿ ಬಂಟ್ವಾಳದಲ್ಲಿ ಮತದಾರರು ಕಾಂಗ್ರೆಸ್ಸಿನ ಅಪಪ್ರಚಾರಗಳಿಗೆ, ಆಸೆ-ಆಮಿಷಗಳಿಗೆ, ಕೈ ಕಾಲು ಹಿಡಿಯುವ ಕುತಂತ್ರಕ್ಕೆ ಬಲಿಯಾಗದೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾಯಕ್ ಅವರನ್ನು ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಲ್ಲಿ ಅಂದರೆ ಸುಮಾರು 25 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುತ್ತಾರೆ ಎಂದು ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ವಿಶ್ವಾಸ ವ್ಯಕ್ತಪಡಿಸಿದರು.
ಬಿ ಸಿ ರೋಡಿನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಅವರಿಗೆ ಸೋಲು ಖಚಿತವಾಗಿರುವ ಹಿನ್ನಲೆಯಲ್ಲಿ ಅಂತಿಮವಾಗಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರ ಕಾಲು ಹಿಡಿಯಲು ಹೋಗಿದ್ದಾರೆ. ಆದರೆ ರಮಾನಾಥ ರೈ ಅವರ ಪೂರ್ಣ ಪರಿಚಯ ಬಂಟ್ವಾಳದ ಜನರಿಗೆ ಅರಿವಿದೆ. ಅವರ ರಾಜಕೀಯ ತಂತ್ರ-ಕುತಂತ್ರಗಳ ಬಗ್ಗೆಯೂ ಜನ ಅರಿತುಕೊಂಡಿದ್ದಾರೆ. ಅವರ ರಾಜಕೀಯ ಗಿಮಿಕ್ ಗಳಿಗೆ ಜನ ಮಣ್ಣು ಹಾಕುವುದಿಲ್ಲ. ಅಧಿಕಾರ ಇಲ್ಲದೆ ಕಾಂಗ್ರೆಸಿಗರು ನೀರಿನಿಂದ ಹೊರ ತೆಗೆದ ಮೀನಿನಂತಾಗಿದ್ದಾರೆ ಎಂದು ಲೇವಡಿ ಮಾಡಿದರು.
ಮೋದಿ ಪ್ರಧಾನಿ ಆದರೆ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯ ಎಂದು ಈ ಹಿಂದೆ ಜನಾರ್ದನ ಪೂಜಾರಿ ನೀಡಿರುವ ಹೇಳಿಕೆ ಇದೀಗ ವೈರಲ್ ಆಗುತ್ತಿದೆ. ರೈಗಳು ಪೂಜಾರಿ ಅವರಿಗೆ ಬೈದದ್ದು ಅವರನ್ನು ಕೂಗಿಸಿದ್ದು ಎಲ್ಲವೂ ವೈರಲ್ ಆಗುತ್ತಿದೆ ಎಂದ ಹರಿಕೃಷ್ಣ ಅಭಿವೃದ್ದಿಯ ಭಾರತ ನಿರ್ಮಾಣವೇ ಬಿಜೆಪಿಯ ಅಜೆಂಡಾ. ಕ್ರಿಮಿನಲ್ ರಾಜಕೀಯವನ್ನು ಪರಿಚಯಿಸಿದವರೇ ಕಾಂಗ್ರೆಸಿಗರು. ಇಂದಿರಾ ಗಾಂಧಿ ಅರೆಸ್ಟ್ ಆದಾಗ ವಿಮಾನ ಸ್ಫೋಟಿಸುವ ಬೆದರಿಕೆ ಹಾಕಿದ ವ್ಯಕ್ತಿಗೆ ನಿರಂತರವಾಗಿ ಎಂಪಿ ಟಿಕೆಟ್ ನೀಡಿದ ಕಾಂಗ್ರೆಸ್ ಆ ಬಳಿಕವೂ ಕ್ರಿಮಿನಲ್ ಗಳನ್ನು ಪೋಷಿಸುತ್ತಾ ಬಂದಿದ್ದಾರೆ ಎಂದು ಟೀಕಿಸಿದರು.
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪಕ್ಷ 125 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ರಾಜ್ಯದ ಅಸ್ಥಿರತೆಗೆ ಅವಕಾಶ ನೀಡದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದು, ಇದನ್ನು ಜನ ಸ್ವೀಕರಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ನಿಚ್ಚಳ ಎಂದರು.
ಉಚಿತ ಘೋಷಣೆಗಳನ್ನು ಕೊಡುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ. ಇತರ ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಭರವಸೆ ಯಾವುದನ್ನೂ ಈಡೇರಿಸಿಲ್ಲ. ಕರ್ನಾಟಕದಲ್ಲಿ ಅವರು ಉಚಿತ ಗ್ಯಾರಂಟಿ ಕೊಡುವ ಪ್ರಶ್ನೆಯೇ ಬರುವುದಿಲ್ಲ. ಏಕೆಂದರೆ ಕಾಂಗ್ರೆಸಿಗರು ಅಧಿಕಾರಕ್ಕೆ ಬರುವುದೇ ಇಲ್ಲ ಎಂದು ಹೇಳಿದರು.
ಈ ಸಂದರ್ಭ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ , ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಪ್ರಮುಖ ಪುರುಷೋತ್ತಮ ಶೆಟ್ಟಿ ವಾಮದಪದವು, ಪ್ರಚಾರ ಸಮಿತಿ ಪ್ರಮುಖ್ ರಂಜಿತ್ ಮೈರ ಜೊತೆಗಿದ್ದರು.
0 comments:
Post a Comment