ಬೆಳ್ತಂಗಡಿ, ಮೇ 22, 2023 (ಕರಾವಳಿ ಟೈಮ್ಸ್) : ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಜಂಕ್ಷನ್ನಿನಲ್ಲಿ ಭಾನುವಾರ (ಮೇ 21) ರಸ್ತೆ ದಾಟುತ್ತಿದ್ದ ಪಾದಚಾರಿ ಸ್ಥಳೀಯ ನಿವಾಸಿ ಸುರೇಶ್ ನಾಯ್ಕ ಅವರಿಗೆ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಸುರೇಶ್ ನಾಯ್ಕ ಅವರು ಭಾನುವಾರ ಬೆಳಿಗ್ಗೆ ಗುರುವಾಯನಕೆರೆ ಜಂಕ್ಷನ್ನಿನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬೆಳ್ತಂಗಡಿ ಕಡೆಯಿಂದ ಮದ್ದಡ್ಕ ಕಡೆಗೆ ಬರುತ್ತಿದ್ದ ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಪಘಾತಕ್ಕೆ ಬಸ್ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು, ಬಸ್ ಚಾಲಕ ಶಶಿಧರ್ ವಿರುದ್ದ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment