ಬಂಟ್ವಾಳ, ಮೇ 25, 2023 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮ ಪಂಚಾಯತ್ ಹಿರಿಯ ಸದಸ್ಯ, ಸಕ್ರಿಯ ಕಾಂಗ್ರೆಸ್ ನಾಯಕ, ಪುದು ಗ್ರಾಮದ ಮಾರಿಪಳ್ಳ ಸಮೀಪದ ಪಾಡಿ ನಿವಾಸಿ ಹುಸೈನ್ ಪಾಡಿ (65) ಅವರು ಹಠಾತ್ ಕಾಣಿಸಿಕೊಂಡ ಅನಾರೋಗ್ಯದಿಂದ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಪುದು ಗ್ರಾಮ ಪಂಚಾಯತ್ ವಾರ್ಡ್ ಸಂಖ್ಯೆ 10 ರ ಚುನಾಯಿತ ಸದಸ್ಯರಾಗಿದ್ದ ಇವರಿಗೆ ಬುಧವಾರ ಹಠಾತ್ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಗುರುವಾರ ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪುದು ಗ್ರಾಮ ಪಂಚಾಯತಿಗೆ 6 ಬಾರಿ ಚುನಾಯಿತರಾಗಿದ್ದ ಇವರು ಕಾಂಗ್ರೆಸ್ ಪಕ್ಷದ ಸಕ್ರಿಯ ನಾಯಕರಾಗಿದ್ದರು. ಎರಡು ತಿಂಗಳ ಹಿಂದೆ ನಡೆದ ಪುದು ಪಂಚಾಯತ್ ಚುನಾವಣೆಯಲ್ಲಿ ಇವರು ಮತ್ತೆ ಪುನರಾಯ್ಕೆಗೊಂಡಿದ್ದರು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲೂ ಸಕ್ರಿಯವಾಗಿದ್ದ ಇವರು ಮಾರಿಪಳ್ಳ ಬದ್ರಿಯ್ಯೀನ್ ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಕೋಶಾಧಿಕಾರಿಯಾಗಿ, ಸುಜೀರು ಸರಕಾರಿ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ, ಮೂರು ಗಂಡು, ಮೂರು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಗುರುವಾರ ಸಂಜೆ ವೇಳೆಗೆ ಮಾರಿಪಳ್ಳ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಹುಸೈನ್ ಪಾಡಿ ಅವರ ಹಠಾತ್ ನಿಧನಕ್ಕೆ ಕ್ಷೇತ್ರದ ಶಾಸಕ, ರಾಜ್ಯ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಜಿ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
0 comments:
Post a Comment