ಮಂಗಳೂರು, ಮೇ 08, 2023 (ಕರಾವಳಿ ಟೈಮ್ಸ್) : ಜನರಿಗೆ ಮೋಸ ಮಾಡುವುದು ಹೇಗೆ ಎಂದು ಬಿಜೆಪಿಯನ್ನು ನೋಡಿ ಕಲಿಯಬೇಕು ಎಂದು ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ರಾಜ್ಯ ವಿಧಾನಸಭಾ ವಿರೋಧ ಪಕ್ಷದ ಉಪನಾಯಕ, ಮಾಜಿ ಮಂತ್ರಿ ಯು ಟಿ ಖಾದರ್ ವ್ಯಂಗ್ಯವಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಜೆಟಿನಲ್ಲಿ ಘೋಷಿಸಲ್ಪಟ್ಟ ಒಂದು ರೂಪಾಯಿಯೂ ಜನರ ಉಪಕಾರಕ್ಕೆ ದೊರೆಯಲಿಲ್ಲ ಎಂದು ಟೀಕಿಸಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಕೋಮುವಾದಿಗಳ ಕೈಯಲ್ಲಿ ಅಧಿಕಾರವಿದೆ. ಇದು ಪ್ರಜಾಪ್ರಭುತ್ವ ಹಾಗೂ ಸಾರ್ವಭೌಮ ರಾಷ್ಟ್ರವಾಗಿರುವ ಭಾರತಕ್ಕೆ ಬಹಳಷ್ಟು ಅಪಾಯಕಾರಿಯಾಗಿದೆ ಎಂದ ಯು ಟಿ ಖಾದರ್, ಬಿಜೆಪಿ ಅಧಿಕಾರಾವಧಿಯಲ್ಲಿ ಮೆಣಸು, ಎಣ್ಣೆ, ಸಿಮೆಂಟ್, ಸ್ಟೀಲ್ ಸಹಿತ ಎಲ್ಲ ದಿನ ಬಳಕೆಯ ವಸ್ತುಗಳ ಬೆಲೆಯಲ್ಲೂ ಗಣನೀಯ ಏರಿಕೆ ಕಂಡಿದ್ದು, ಜನ ಬದುಕುವುದೇ ದುಸ್ತರವಾಗಿದೆ ಎಂದರು.
ಇತಿಹಾಸದಲ್ಲಿ ಜನಪರ ಕಾಳಜಿಗೆ ಪಾತ್ರವಾದ ಸಿದ್ದರಾಮ್ಯಯ್ಯ ಸರಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅನಿವಾರ್ಯತೆ ಇದೆ ಎಂದ ಖಾದರ್ ಈ ಬಾರಿ ನಡೆಯುತ್ತಿರುವುದು ಸತ್ಯ ಮತ್ತು ಅಸತ್ಯದ ಚುನಾವಣೆಯಾಗಿದೆ. ಜನರ ಈ ಬಾರಿ ಸತ್ಯದ ಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಜನ ಬಿಜೆಪಿ ಅಧಿಕಾರಾವಧಿಯಲ್ಲಿ ಅನುಭವಿಸಿದ ನೋವು, ದುಃಖ, ದುಮ್ಮಾನ, ಜೀವನ ಜಂಜಾಟಗಳ ಅಂತರಾಳದ ವೇದನೆ ಎಲ್ಲವೂ ಈ ಬಾರಿಯ ಚುನಾವಣೆಣಾ ಫಲಿತಾಂಶದಂದು ಅನಾವರಣಗೊಳ್ಳಲಿದೆ ಎಂದ ಯುಟಿಕೆ ರಾಜ್ಯದ ಜನ ಈಗಾಗಲೇ ಬಿಜೆಪಿ ವಿರುದ್ದ ತೊಡೆತಟ್ಟಿದ್ದು, ಚುನಾವಣೆಯಲ್ಲಿ ಸಂಪೂರ್ಣವಾಗಿ ಬಿಜೆಪಿ ಅಭ್ಯರ್ಥಿಗಳ ವೈಟ್ ವಾಶ್ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಪಕ್ಷದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪದಿದ್ದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸಲಿದ್ದೇನೆ ಎಂದ ಮಾಜಿ ಮಂತ್ರಿ ಬಿಜೆಪಿ ತನ್ನ ಸ್ವಯಂಕೃತಾಪರಾಧದಿಂದ ಅಧಃಪತನದತ್ತ ಬಂದರೂ ಇನ್ನೂ ಪಾಠ ಕಲಿಯದ ಅದರ ನಾಯಕರು ಜಾತಿ ಧರ್ಮವನ್ನು ಅಡ್ಡ ತಂದು ಜನರ ಮನಸನ್ನು ಕಲುಷಿತಗೊಳಿಸುವ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ಇವರ ಎಲ್ಲ ಧಾರ್ಮಿಕ ಅಜೆಂಡಾವನ್ನು ರಾಜ್ಯದ ಜನ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದು, ಹೇಳುವುದು ವೇದ, ಇಕ್ಕುವುದು ಗಾಳ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಬಿಜೆಪಿ ಆಡಳಿತ ವೈಫಲ್ಯದಿಂದಾಗಿ ಜನ ಉದ್ಯೋಗವಿಲ್ಲದೆ ತಿರುಗಾಡುತಿದ್ದಾರೆ, ಯುವ ಸಮೂಹ ಪದವಿ ಕಲಿತರೂ ಕೂಡಾ ಹೊಟೇಲುಗಳಲ್ಲಿ ಕೂಲಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
0 comments:
Post a Comment