- ಡಿ.ಎಸ್.ಐ.ಬಿ ಪಾಣೆಮಂಗಳೂರು |
ಕೇವಲ 5 ನಿಮಿಷದಲ್ಲಿ ನಾವು ನೀಡುವ ಒಂದು ಮತ ಸುಮಾರು 5 ವರ್ಷಗಳ ಕಾಲ ಜೀವಂತವಾಗಿ ಕೋಟ್ಯಾಂತರ ಜನರ ಕಷ್ಟ ಸುಖಕ್ಕೆ ಅಥವಾ ದುಖಕ್ಕೆ ಕಾರಣವಾಗಲಿದೆ. ನಮ್ಮ ನಿರ್ಧಾರ ಸರಿಯಾಗಿದ್ದರೆ ನಮ್ಮ ಜೊತೆ ಎಲ್ಲರೂ ಕೂಡ ನೆಮ್ಮದಿಯಾಗಿರುವರು. ನಮ್ಮ ನಿರ್ಧಾರ ಇನ್ನೊಬ್ಬರ ಆಯ್ಕೆಯಾಗಿದ್ದರೆ ನಮ್ಮ ಜೊತೆಗೆ ಎಲ್ಲರೂ ಕೂಡ ನರಕ ಜೀವನ ಅನುಭವಿಸುವರು. ಇನ್ನೇನು ಒಂದೆರಡು ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿ ತುಂಬಾ ಪೈಪೆÇಟಿಯಲ್ಲಿ ನಡೆಯಲಿದೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಸರ್ವ ಜನಾಂಗದ ಶಾಂತಿಯುತವಾದ ಈ ತೋಟದ ಅಂಗಳದಲ್ಲಿ ಜೀವಿಸುತ್ತಿರುವ ನಾವುಗಳು ಖಂಡಿತವಾಗಿಯೂ ನಮ್ಮ ತೋಟದಲ್ಲಿ ಬೆಳೆಯುತ್ತಿರುವ ಕಾಯಿಗಳನ್ನು ಇನ್ನೊಬ್ಬರು ಕದ್ದು ತಿನ್ನದಂತೆ ನಾವುಗಳು ಜಾಗೃತರಾಗಿರಬೇಕು. ಸೀರೆ, ಕುಕ್ಕರ್, ಸಾರಾಯಿ ಒಂದಿಷ್ಟು ಚಿಲ್ಲರೆ ಹಣಗಳನ್ನು ಕೊಟ್ಟ ತಕ್ಷಣ ಅವರು ತುಂಬಾ ಒಳ್ಳೆಯವರು ಮುಂದಿನ ದಿನಗಳಲ್ಲಿ ಅಧಿಕಾರ ಸಿಕ್ಕರೆ ನಮ್ಮನ್ನು ಕಷ್ಟ ನಷ್ಟದಿಂದ ಪಾರು ಮಾಡುತ್ತಾರೆಂದು ಹಿಂದೆ ಮುಂದೆ ನೋಡದೆ ಅಮೂಲ್ಯವಾದ ನಿಮ್ಮ ಮತವನ್ನು ಅವರಿಗೆ ಮಾರಿ ಬಿಡಬೇಡಿ. ಬಣ್ಣ ಬಣ್ಣದ ಕಥೆಗಳನ್ನು ಹೇಳಿದ ತಕ್ಷಣ ನಮ್ಮ ಮುಂದಿನ ಬಾಳು ಸುಂದರವಾಗಿರಬಹುದೆಂದು ನಂಬಿ ಕೆಟ್ಟು ಹೋಗದಿರಿ.
ಪುಟ್ಟ ಮಕ್ಕಳು ತಿನ್ನದಿದ್ದಾಗ ಅಥವಾ ಅಳುತ್ತಿರುವಾಗ ಅವರನ್ನು ಸಮಾಧಾನಿಸಲು ದೊಡ್ಡವರು ದೊಡ್ಡ ದೊಡ್ಡ ಸುಳ್ಳುಗಳನ್ನು ಹೇಳಿ ಅವರನ್ನು ನಂಬಿಸಿ ಬಿಡುತ್ತಾರೆ. ನೀನು ಊಟ ಮಾಡಿದರೆ ನಿನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುವೆ ಅದು ಇದು ಕೊಡುವೆ ಎಂದು ಹೇಳಿ ಅವರನ್ನು ನಂಬಿಸಿ ಬಿಡುತ್ತೇವೆ. ಕೊನೆಗೆ ಅಳುತ್ತಿದ್ದ ಆ ಪುಟ್ಟ ಮಗು ನಿದ್ರೆಗೆ ಜಾರಿ ಪುನಃ ಮರು ದಿನ ಕೂಡ ಅದೇ ಹಾಡು ಅದೇ ರಾಗವಾಗಿ ಮುಂದುವರಿಯುತ್ತವೆ. ಇದನ್ನೇ ಕೆಲವೊಂದು ರಾಜಕಾರಣಿಗಳು ಮಾಡುತ್ತಿರುವುದು.
ಚುನಾವಣಾ ಮುಂದಿನ ದಿನಗಳ ತನಕ ಮತದಾರನ ಚಪ್ಪಲಿಯನ್ನು ಕೂಡ ಬೇಕಾದರೆ ಕೈಯಲ್ಲಿ ಮುಟ್ಟಲು ತಯಾರಿರುತ್ತಾರೆ. ಆ ಸಮಯದಲ್ಲಿ ನಾವು ಏನೇ ಅವರ ಬಳಿ ಕೇಳಿದರು ಅವರು ಹೇಳುವುದು ಒಂದೇ. “ನಮ್ಮ ಸರಕಾರ ಬರಲಿ ನಿಮಗೆ ಎಲ್ಲಾ ಅಭಿವೃದ್ಧಿ ಮಾಡಿಕೊಡುವ” ನಾವಿದ್ದೇವೆ ಅಲ್ವ. ಸುಳ್ಳು ಭರವಸೆಗಳನ್ನು ಹೇಳಿ ಅವರ ಮಾತಿಗೆ ಬೆಲೆ ಕೊಟ್ಟು ಅವರನ್ನು ಬೆಂಬಲಿಸಿ ಅಧಿಕಾರ ಕೊಟ್ಟು ಕೊನೆಗೆ ನಾವು ಯಾರೆಂದೆ ಅವರಿಗೆ ತಿಳಿದಿರುವುದಿಲ್ಲ.
ನಾವು ಯಾಕಾಗಿ ಪ್ರತಿ ಬಾರಿ ದಡ್ಡರಾಗಿ ಜೀವಿಸಬೇಕು. ಯಾಕಾಗಿ ಇನ್ನೊಬ್ಬರ ಮಾತಿಗೆ ಬಲಿಯಾಗಬೇಕು. ನಮ್ಮಲ್ಲಿ ಬುದ್ಧಿ ಶಕ್ತಿ ಇಲ್ಲವೇ..? ಅಥವಾ ಕಣ್ಣು, ಕಿವಿ, ಬಾಯಿ ಇಲ್ಲವೇ.? ಇನ್ನೊಬ್ಬರ ಮಾತಿಗೆ ಮೋಸವಾಗಿ ಐದು ವರ್ಷಗಳ ಕಾಲ ಯಾಕಾಗಿ ನಾವು ನರಕ ಅನುಭವಿಸಬೇಕು.?
ಮಗಳಿಗೆ ಮದುವೆ ಮಾಡಿಕೊಡಬೇಕಾದರೆ ಊರಿಡಿ ಸುತ್ತಾಡಿ ವರನ ಬಗ್ಗೆ ತಿಳಿದು ನಂತರ ಮದುವೆ ಮಾಡಿಕೊಡುತ್ತೇವೆ ಏಕೆಂದರೆ ನಮ್ಮ ಮಗಳು ಜೀವನ ಪೂರ್ತಿ ಚೆನ್ನಾಗಿರಲಿ ಎಂಬ ಆಸೆಯಲ್ಲಿ. ಅದೇ ರೀತಿ ಒಬ್ಬ ಅಭ್ಯರ್ಥಿಗೆ ಮತ ನೀಡುವಾಗಲು ಕೂಡ ನೂರಾರು ಬಾರಿ ಯೋಚಿಸಿ ಮತ ನೀಡಬೇಕು. ಕೇವಲ ಅವರು ಕೊಟ್ಟ ಪತ್ರದಲ್ಲಿರುವ ಸುಳ್ಳು ಭರವಸೆಗಳನ್ನು ನಂಬಿ ನಮ್ಮ ಅತ್ಯಮೂಲ್ಯವಾದ ಮತವನ್ನು ಪೆÇೀಲು ಮಾಡಬಾರದು. ಮತದಾರ ಜಾಗೃತನಾಗಿರಬೇಕು. ಅಭ್ಯರ್ಥಿ ಕುಟುಂಬದವನಾಗಲಿ ಉತ್ತಮ ಸ್ನೇಹಿತನೆ ಆಗಿರಲಿ ಅಥವಾ ಸ್ವತಃ ತಂದೆ ತಾಯಿಯೆ ಆಗಿರಲಿ, ಮುಂದಿನ ದಿನಗಳಿಗೆ ಸೂಕ್ತ ವ್ಯಕ್ತಿಯಾಗಿದ್ದರೆ ಮಾತ್ರ ಮತ ಕೊಟ್ಟು ಗೌರವಿಸಿ. ಅನ್ಯಾಯವಾಗಿ ಮತ ಕೊಟ್ಟು ಕೈಯಾರೆ ಕೊಲೆ ಮಾಡದಿರಿ.
ನನ್ನ ಅಜ್ಜಂದಿರು ಆ ಪಕ್ಷದಲ್ಲಿ ಇದ್ದವರು ಅವರು ಬೆಳೆಸಿದ ಪಕ್ಷ ನನ್ನ ಮತ ಅದೇ ಪಕ್ಷಕ್ಕೆ ಎಂದು ಮತ ನೀಡುವುದು ತುಂಬಾ ತಪ್ಪು ಭಾವನೆ. ಏಕೆಂದರೆ ಆ ಕಾಲವೇ ಬೇರೆ, ಈ ಕಾಲವೇ ಬೇರೆ. ಆ ದಿನಗಳು ಶಾಂತಿ ಸೌಹಾರ್ದತೆಯಲ್ಲಿ ನಡೆಯುತ್ತಿದ್ದವು. ಆದರೆ ಈ ದಿನಗಳು ತುಂಬಾ ಕಷ್ಟದ ಸಮಯವನ್ನು ದೂಡುತ್ತಿದ್ದೇವೆ. ಒಂದು ಹನಿ ನೀರಿಗೂ ದುಬಾರಿ ಬೆಲೆ ಕೊಟ್ಟು ಕುಡಿಯುವ ಪರಿಸ್ಥಿತಿ ನಮ್ಮದು. ಎಲ್ಲವನ್ನೂ ನೋಡುವಾಗ ನೂರಾರು ಬಾರಿ ಯೋಚಿಸಿ. ಒಬ್ಬ ಅತ್ಯುತ್ತಮ ನಾಯಕನಿಗೆ ಅಧಿಕಾರ ಕೊಟ್ಟು ಆತನನ್ನು ಗೆಲ್ಲಿಸಬೇಕು. ಪಕ್ಷ ಯಾವುದೇ ಆಗಿರಲಿ, ಅಭ್ಯರ್ಥಿ ಯಾರೇ ಆಗಿರಲಿ ಜಾತಿ ಧರ್ಮ ನೋಡದೆ ಉತ್ತಮ ನಾಯಕನಾದರೆ ಮತಕೊಟ್ಟು ಗೆಲ್ಲಿಸಿ. ನನ್ನ ಒಂದು ಓಟಿನಿಂದ ಏನು ಪ್ರಯೋಜನವಿಲ್ಲ ಎಂದು ಮನೆಯಲ್ಲಿ ಕೂರಬೇಡಿ. ನಿಮ್ಮ ಒಂದೇ ಒಂದು ಓಟು ಕೋಟ್ಯಾಂತರ ಜನರ ಭವಿಷ್ಯ ಬರೆಯಲಿದೆ ಎಂಬುದನ್ನು ಯಾವತ್ತಿಗೂ ಮರೆಯದಿರಿ. ಯಾರಾದರೂ ನಿಮ್ಮ ಮನವೊಲಿಸಲು ಏನಾದರೂ ಕೊಟ್ಟರೆ ಪಡೆಯಬೇಡಿ. ನಿಮ್ಮ ಆಯ್ಕೆ ನಿಮ್ಮ ನಿರ್ಧಾರವಾಗಿರಲಿ. ಸೂಕ್ತ ಅಭ್ಯರ್ಥಿಗೆ ಅಧಿಕಾರ ನೀಡುವುದು ನಿಮ್ಮ ಜವಾಬ್ದಾರಿ ನಿಮ್ಮ ಹಕ್ಕು. ಮೇ ಹತ್ತರಂದು ಎಲ್ಲಾ ಕಾರ್ಯಗಳನ್ನು ಬದಿಗಿಟ್ಟು ಹದಿನೆಂಟು ವರ್ಷ ತುಂಬಿದ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ. ನಿಮ್ಮ ಹಕ್ಕನ್ನು ಚಲಾಯಿಸಿ.
0 comments:
Post a Comment