ಅಹ್ಮದಾಬಾದ್, ಮೇ 30, 2023 (ಕರಾವಳಿ ಟೈಮ್ಸ್) : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್-2023ರ ಫೈನಲ್ ಪಂದ್ಯದಲ್ಲಿ ಬೃಹತ್ ಮೊತ್ತದ ಹೋರಾಟದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಬಗ್ಗುಬಡಿದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 5ನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಭಾನುವಾರ ರಾತ್ರಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲ್ಪಟ್ಟಿದ್ದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದರೂ ಮೊದಲು ಗುಜರಾತ್ ಟೈಟಾನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಆಹ್ವಾನಿಸುವ ಧೈರ್ಯ ತೋರಿದರು. ಧೋನಿ ಉದಾರತೆಯಿಂದ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಗಳ ಬೃಹತ್ ಮೊತ್ತವನ್ನೇ ಕಲೆಹಾಕಿತು.
ಪ್ರಥಮ ಇನ್ನಿಂಗ್ಸ್ ಮುಕ್ತಾಯದ ಬಳಿಕ ಮಳೆ ಬಂದು ಆಟ ಸ್ಥಗಿತಗೊಂಡಿತು. ಬಳಿಕ ಕೆಲ ಹೊತ್ತುಗಳ ನಂತರ ಮತ್ತೆ ಆಟ ಪ್ರಾರಂಭವಾದಾಗ ಅಂಪೈರ್ ಗಳು ಗುರಿಯನ್ನು ಪರಿಷ್ಕರಿಸಿ ಚೆನ್ನೈ ತಂಡಕ್ಕೆ 15 ಓವರ್ ಗಳಲ್ಲಿ 171 ರನ್ ಗಳ ಬೃಹತ್ ಗುರಿಯನ್ನು ನಿಗದಿ ಮಾಡಿದರು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಧೋನಿ ಪಡೆದ ಏಳು-ಬೀಳುಗಳನ್ನು ಕಂಡಿತಾದರೂ ಅಂತಿಮವಾಗಿ ನಿಗದಿತ 15 ಓವರ್ ನಲ್ಲಿ 172 ರನ್ ಗಳಿಸಿ 5 ವಿಕೆಟ್ ಗಳ ಅಂತರ ವಿರೋಚಿತ ಜಯ ದಾಖಲಿಸುವ ಮೂಲಕ ಐಪಿಎಲ್ ಕೂಟದ ಇತಿಹಾಸದಲ್ಲಿ 5ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಚೆನ್ನೈ ಪರ ರುತುರಾಜ್ ಗಾಯರ್ವಾಡ್ 26 ರನ್ ಗಳಿಸಿದರೆ, ಡೆವಾನ್ ಕಾನ್ವೆ 46 ರನ್ ಗಳಿಸಿದರು. ಶಿವಂ ದುಬೆ 26 ರನ್ ಗಳಿಸಿದರೆ ಅಂಜಿಕ್ಯ ರಹಾನೆ 27 ರನ್ ಗಳಿಸಿದರು. ಅಂಬಾಟಿ ರಾಯುಡು 19 ರನ್ ಗಳಿಸಿದರು. ನಾಯಕ ಧೋನಿ ಮಾತ್ರ ತಾನೆದುರಿಸಿದ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು.
ಅಂತಿಮ 2 ಎಸೆತಗಳಲ್ಲಿ 10 ಬೇಕು ಎನ್ನುವ ಹಂತದಲ್ಲಿ ಮೋಹಿತ್ ಶರ್ಮ ಅವರ 5ನೇ ಎಸೆತವನ್ನು ಸಿಕ್ಸರ್‍ಗೆ ಅಟ್ಟಿದ ರವೀಂದ್ರ ಜಡೇಜಾ ಕೊನೆಯ ಎಸೆತವನ್ನು ಬೌಂಡಿಯಾಗಿ ಪರಿವರ್ತಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಗುಜರಾತ್ ಪರ ನೂರ್ ಅಹ್ಮದ್ 2 ವಿಕೆಟ್ ಪಡೆದರೆ ಮೋಹಿತ್ ಶರ್ಮಾ 3 ವಿಕೆಟ್ ಪಡೆದರು.
0 comments:
Post a Comment