ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳೊಂದಿಗೆ ಸಿಎಂ ಸಭೆ
ಬೆಂಗಳೂರು, ಮೇ 24, 2023 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳೊಂದಿಗೆ ಬುಧವಾರ (ಮೇ 24) ಸಭೆ ನಡೆಸಿದರು.
ನಾಡಿನ ಜನತೆ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಕಾಲ ಮಿತಿಯಲ್ಲಿ ಕೆಲಸ ಮಾಡಿ ಜನರ ನಿರೀಕ್ಷೆ ಈಡೇರಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ನನ್ನ ರಾಜಕೀಯ ಜೀವನದಲ್ಲಿ ತಪ್ಪಿಲ್ಲದೆ ಯಾವುದೇ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿಲ್ಲ. ನಿಮ್ಮ ತಪ್ಪಿನಿಂದ ಸರಕಾರಕ್ಕೆ ಕೆಟ್ಟ ಹೆಸರು ಬಂದರೆ ನಾವು ಸಹಿಸಲ್ಲ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ಅವರು ನಮ್ಮನ್ನು ಆರಿಸಿ ಕಳುಹಿಸಿದ್ದಾರೆ. ಅವರ ಪ್ರತಿನಿಧಿಗಳಾಗಿ ಇಲ್ಲಿಗೆ ಬಂದಿದ್ದೇವೆ. ಅವರ ಆಶೋತ್ತರಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಜನರ ನಿರೀಕ್ಷೆಗೆ ಅನುಗುಣವಾಗಿ ಎಲ್ಲರೂ ಕೆಲಸ ಮಾಡಬೇಕಾಗಿತ್ತದೆ. ಜನರ ಆಶೋತ್ತರಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಅವರಿಗೆ ಸ್ಪಂದಿಸಸಬೇಕೆನ್ನುವ ಬಯಕೆ ಸರಕಾರದ್ದಾಗಿದೆ. ಉತ್ತಮ ಸರಕಾರದ ನಿರೀಕ್ಷೆ, ಕಿರಿಕಿರಿ ಮಾಡದ ಸರಕಾರ, ಕ್ರಿಯಾಶೀಲ ಸರಕಾರದ ಅಗತ್ಯವಿದೆ ಎಂದು ಜನ ಬಯಸಿದ್ದಾರೆ. ಹಿಂದಿನ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿದೆ, ಭ್ರಷ್ಟಾಚಾರವಿದೆ ಎಂಬ ಭಾವನೆ ಜನರಲ್ಲಿತ್ತು. ಈ ಭಾವನೆಯನ್ನು ಹೋಗಲಾಡಿಸಲು ಅಧಿಕಾರಿಗಳು ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಸಿಎಂ ಮನವಿ ಮಾಡಿದರು.
ಗುಣಮಟ್ಟದ ಕಾಮಗಾರಿಗಳಾಗಬೇಕು, ಕಾಲಮಿತಿಯಲ್ಲೇ ಕೆಲಸಗಳಾಗಬೇಕು. ಕಣ್ಣುಮುಚ್ಚಿಕೊಂಡು ಸಹಿ ಹಾಕದೇ ಜನರ ಹಣವನ್ನು ಸರಿಯಾದ ರೀತಿಯಲ್ಲಿ ವೆಚ್ಚ ಮಾಡಬೇಕು. ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು. ಇವುಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮೇಲ್ವಿಚಾರಣೆ ಮಾಡಬೇಕು. ಕ್ಷೇತ್ರಗಳಿಗೆ ಕಾಲಕಾಲಕ್ಕೆ ಭೇಟಿ ನೀಡುವುದಲ್ಲದೇ ಕಚೇರಿಗಳಿಗೆ ಅನಿರೀಕ್ಷಿತ ಭೇಟಿಯನ್ನೂ ನೀಡಬೇಕು. ಹಿರಿಯ ಅಧಿಕಾರಿಗಳು ನಿಯಮಗಳನ್ನು ಪಾಲಿಸಬೇಕು. ಯೋಜನೆಗಳ ಕ್ಷಿಪ್ರ ಅನುಷ್ಠಾನವಾದರೆ ಜನರಿಗೆ ಪ್ರಯೋಜನವಾಗುತ್ತದೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆನ್ನುವುದು ಸರಕಾರದ ಉದ್ದೇಶವಾಗಿದೆ. ಜನರ ಕಷ್ಟಗಳಿಗೆ ಸ್ಪಂದಿಸುವವರೇ ಮನುಷ್ಯರು ಎಂದು ಅರ್ಥಮಾಡಿಕೊಂಡು ತಾವೆಲ್ಲರೂ ಜನರ ನಿರೀಕ್ಷೆಗಳಿಗೆ ಸಕಾಲದಲ್ಲಿ ಸೂಕ್ತ ರೀತಿ ಸ್ಪಂದಿಸಬೇಕೆಂದು ಬಯಸುತ್ತೇವೆ ಎಂದು ಸಿಎಂ ಸಿದ್ದರಾಮ್ಯ ಅಧಿಕಾರಿಗಳಿಗೆ ಸೂಚಿಸಿದರು.
0 comments:
Post a Comment