ಬೆಂಗಳೂರು, ಮೇ 21, 2023 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಬೆಂಗಳೂರಿನಲ್ಲಿ ಭಾರೀ ಮಳೆಯ ಕಾರಣಕ್ಕಾಗಿ ಉಂಟಾಗಿರುವ ಟ್ರಾಫಿಕ್ ಜಾಂ ಬಿಸಿ ಸ್ವತಃ ತನಗೇ ತಟ್ಟಿದ ಸಂದರ್ಭ ಜನರಿಗಾಗಿ ಕರಗಿದ ಸಿದ್ದರಾಮಯ್ಯ ನನ್ನಿಂದಾಗಿ ಜನ ಟ್ರಾಫಿಕ್ ಜಂಜಾಟ ಅನುಭವಿಸಬಾರದು ಎಂಬ ನಿಟ್ಟಿನಲ್ಲಿ ನನಗೆ ಝೀರೋ ಟ್ರಾಫಿಕ್ ಬೇಡವೆಂದು ಹೇಳಿದ್ದಾರೆ.
ಈ ಬಗ್ಗೆ ಸ್ವತಃ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, “ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಝೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೆÇಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್ ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ” ಎಂದು ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊದಲೇ ಟ್ರಾಫಿಕ್ ಜಂಜಾಟ. ಭಾನುವಾರವಂತೂ ಭಾರೀ ಮಳೆಯ ಕಾರಣಕ್ಕೆ ಇಡೀ ನಗರದಲ್ಲಿ ಭಾರೀ ಟ್ರಾಫಿಕ್ ಕಿರಿ ಕಿರಿ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿತ್ತು. ಮಳೆಬಂದ ಹಿನ್ನೆಲೆಯಲ್ಲಿ ತುರ್ತು ಕಾರ್ಯ ನಿಮಿತ್ತ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸಂಚಾರ ಮಾಡುವಾಗ ಭಾರಿ ಪ್ರಮಾಣದ ಟ್ರಾಫಿಕ್ ನಿರ್ಮಾಣವಾಗಿತ್ತು. ಅಲ್ಲದೆ ಸ್ವತಃ ಸಿಎಂ ಅವರು ಕೂಡಾ ಟ್ರಾಫಿಕ್ ಜಾಂನಲ್ಲಿ ಸಿಲುಕಿ ಪರದಾಡಿದ್ದಾರೆ. ಒಬ್ಬ ಮುಖ್ಯಮಂತ್ರಿಯಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ಇದ್ದು ಕೂಡಾ ಇಷ್ಟೊಂದು ಸಮಸ್ಯೆ ಆಗುತ್ತಿರುವಾಗ, ಜನಸಾಮಾನ್ಯರಿಗೆ ಎಷ್ಟು ತೊಂದರೆ ಆಗಬೇಡ ಎಂದು ಆಲೋಚನೆ ಮಾಡಿ ಸಿಎಂ ಸಿದ್ದು ಝೀರೋ ಟ್ರಾಫಿಕ್ ನಿರಾಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಮಳೆ ಅವಾಂತರ ಸೃಷ್ಟಿಯಾಗಿದ್ದು ಕೇವಲ ಒಂದು ಗಂಟೆ ಸುರಿದ ಮಳೆಗೆ 70ಕ್ಕೂ ಅಧಿಕ ಮರಗಳು ಉರುಳಿ ಬಿದ್ದಿವೆ. ಮಹಾಲಕ್ಷ್ಮೀ ಲೇಔಟ್‍ನಲ್ಲಿ ಚರಂಡಿಯ ಸ್ಲ್ಯಾಬ್ ಕುಸಿತವಾಗಿದ್ದು, ಮೋರಿಯ ನೀರು ರಸ್ತೆಯ ಮೇಲೆ ಹರಿದಿದೆ. ಪರಿಣಾಮ ತಗ್ಗು ಪ್ರದೇಶದ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಬೆಂಗಳೂರಿನ ಕೆ ಆರ್ ಸರ್ಕಲ್ ಬಳಿಯಿರುವ ಅಂಡರ್ ಪಾಸಿನಲ್ಲಿ ನೀರು ನಿಂತು, ಅದರೊಳಗೆ ಕಾರು ಮುಳುಗಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಮೃತ ಯುವತಿಯನ್ನು ನೋಡಲು ಆಸ್ಪತ್ರೆಗೆ ಸಿಎಂ ಭೇಟಿ ನೀಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟ್ರಾಫಿಕ್ ಜಾಮ್ ಅರಿವಾಗಿದೆ.
ಇದಾದ ನಂತರ ಮಹಾಲಕ್ಷ್ಮೀ ಲೇಔಟ್‍ನಲ್ಲಿ ಮನೆಗಳಿಗೆ ನೀರು ನುಗ್ಗಿದ ಸ್ಥಳಕ್ಕೆ ಹೋಗುವುದಕ್ಕೆ ಆಲೋಚನೆ ಮಾಡಿದ್ದ ಸಿಎಂ ನಗರದಲ್ಲಿ ಟ್ರಾಫಿಕ್ ಹೆಚ್ಚಾಗಿರುವ ಮಾಹಿತಿ ಲಭ್ಯವಾದ್ದರಿಂದ ತಾವು ಝೀರೋ ಟ್ರಾಫಿಕ್‍ನಲ್ಲಿ ಮಹಾಲಕ್ಷ್ಮೀ ಲೇಔಟ್‍ಗೆ ಹೋಗುವುದರಿಂದ ಮತ್ತಷ್ಟು ಟ್ರಾಫಿಕ್ ಉಂಟಾಗಬಹುದು ಎಂದುಕೊಂಡು ಸಿಎಂ ಸಿದ್ದರಾಮಯ್ಯ ಸ್ಥಳ ಭೇಟಿ ರದ್ದುಗೊಳಿಸಿದ್ದಾರೆ. ಬಳಿಕ ತಮಗಿದ್ದ ಝೀರೋ ಟ್ರಾಫಿಕ್ ಅವಕಾಶವನ್ನೇ ಹಿಂಪಡೆಯುವಂತೆ ಪೊಲೀಸ್ ಅಧಿಕಾರಿಗಳಿಗೆ ಕೋರಿಕೊಂಡಿದ್ದು, ಜನರಿಗಾಗಿ ತನ್ನ ಸೌಲಭ್ಯವನ್ನು ತ್ಯಾಗ ಮಾಡಿ ತಾನೋರ್ವ ಸರಳ ಮುಖ್ಯಮಂತ್ರಿ ಎಂಬುದನ್ನು ನಿರೂಪಿಸಿದ್ದಾರೆ.
0 comments:
Post a Comment