ಬಂಟ್ವಾಳ, ಮೇ 29, 2023 (ಕರಾವಳಿ ಟೈಮ್ಸ್) : ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸುವ ಸಲುವಾಗಿ ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ರಕ್ತವನ್ನು ದಾನ ಮಾಡುವ ಮೂಲಕ ಪ್ರತಿಯೊಬ್ಬರೂ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಸಾಧ್ಯ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ ರಕ್ತಕ್ಕೆ ಪರ್ಯಾಯವಾದ ವಸ್ತು ಇನ್ನೊಂದಿಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ ಕೆ ಎ ನಾಗರತ್ನ ಹೇಳಿದರು.
ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ, ಯುವ ರೆಡ್ ಕ್ರಾಸ್ ಘಟಕ, ಐಕ್ಯುಎಸಿ ಘಟಕ, ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಮಂಗಳೂರು ವೆನ್‍ಲಾಕ್ ಜಿಲ್ಲಾಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವೆನ್‍ಲಾಕ್ ಜಿಲ್ಲಾಸ್ಪತ್ರೆಯ ಬ್ಲಡ್‍ಬ್ಯಾಂಕ್ ಅಧಿಕಾರಿ ಆಂಟನಿ ಮಾತನಾಡಿ, ರಕ್ತದಾನ ಶ್ರೇಷ್ಠ ದಾನವಾಗಿದೆ. ಅರ್ಹ ಕಾಲೇಜು ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ಅದು ವರದಾನವಾಗಿ ಪರಿಣಮಿಸುತ್ತದೆ. ರಕ್ತದಾನ ಮಾಡುವುದರ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದ ಮೊದಲು ನಾವು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ ಸುಯೋಗ ವರ್ಧನ್ ಡಿ ಎಂ ಮಾತನಾಡ, ರಕ್ತದಾನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿರುವುದು ಅಭಿನಂದನೀಯ ಎಂದರಲ್ಲದೆ ರಕ್ತದಾನದ ಮಾಹಿತಿಯನ್ನು ಸಮಾಜದ ಇತರರಿಗೂ ಯುವಜನತೆ ನೀಡುವಂತಾಗಬೇಕೆಂದರು.
ವೆನ್‍ಲಾಕ್ ಜಿಲ್ಲಾಸ್ಪತ್ರೆಯ ಕಿರಿಯ ವೈದ್ಯಾಧಿಕಾರಿ ಡಾ ಸೆಲ್ವಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾಯೋಜನೆ ಘಟಕದ ಕಾರ್ಯಕ್ರಮಾಧಿಕಾರಿ ಡಾ ಕಾಶೀನಾಥ್ ಶಾಸ್ತ್ರಿ ಎಚ್ ವಿ ಸ್ವಾಗತಿಸಿ, ಐಕ್ಯುಎಸಿ ಸಂಯೋಜಕ ಡಾ ಟಿ ಕೆ ರವೀಂದ್ರನ್ ವಂದಿಸಿದರು. ಕುಮಾರಿ ಶ್ರಾವ್ಯ ಪ್ರಾರ್ಥಿಸಿ, ಸಹಾಯಕ ಕಾರ್ಯಕ್ರಮಾಧಿಕಾರಿ ಕಿಟ್ಟು ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment