ಬಂಟ್ವಾಳ, ಮೇ 04, 2023 (ಕರಾವಳಿ ಟೈಮ್ಸ್) : ಗೋಳ್ತಮಜಲು ಗ್ರಾಮದ ಗಣೇಶನಗರ ಎಂಬಲ್ಲಿ ಗುರುವಾರ ಮಧ್ಯಾಹ್ನ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆ ಹಚ್ಚಿದ ಬಂಟ್ವಾಳ ನಗರ ಠಾಣಾ ಪಿಎಸ್ಸೈ ರಾಮಕೃಷ್ಣ ನೇತೃತ್ವದ ಪೊಲೀಸರು ಜಾನುವಾರು ಸಹಿತ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಪುದು ಗ್ರಾಮದ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಶಾಲಾ ಬಳಿ ನಿವಾಸಿ ದಿವಂಗತ ಕೆ ಮೊಹಮ್ಮದ್ ಅವರ ಪುತ್ರ ಬಶೀರ್ ಕೆ (32) ಹಾಗೂ ಮಂಗಿಲಪದವು ಸಮೀಪದ ಒಕ್ಕೆತ್ತೂರು ನಿವಾಸಿ ಡೆನ್ನಿಸ್ ಮಸ್ಕರೇನಸ್ ಅವರ ಪುತ್ರ ಜೆರಾಲ್ಡ್ ಮಸ್ಕರೇನಸ್ (48) ಎಂದು ಹೆಸರಿಸಲಾಗಿದೆ.
ಬಂಟ್ವಾಳ ನಗರ ಠಾಣಾ ಪೊಲೀಸರು ಗುರುವಾರ ಬೆಳಿಗ್ಗೆ ಗೋಳ್ತಮಜಲು ಗ್ರಾಮದ ಗಣೇಶನಗರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವಿಟ್ಲ ಕಡೆಯಿಂದ ಬರುತ್ತಿದ್ದ ಟೆಂಪೋ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ಕಾರ್ಯಾಚರಣೆ ವೇಳೆ 13 ಸಾವಿರ ರೂಪಾಯಿ ಮೌಲ್ಯದ ದನ, 3 ಸಾವಿರ ರೂಪಾಯಿ ಮೌಲ್ಯದ ಕರು ಹಾಗೂ ಸುಮಾರು 75 ಸಾವಿರ ರೂಪಾಯಿ ಮೌಲ್ಯದ ಟೆಂಪೋ ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
0 comments:
Post a Comment