ಬಂಟ್ವಾಳ, ಮೇ 30, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಮ್ಮ ಕಚೇರಿ ಉದ್ಘಾಟನಾ ದಿನವಾದ ಸೋಮವಾರ (ಮೇ 29) ಚುನಾವಣಾ ಪೂರ್ವದಲ್ಲಿ ಅಕಾಲಿಕವಾಗಿ ಮೃತಪಟ್ಟ ನಾಲ್ವರು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿಗಳ ಸಹಾಯ ಹಸ್ತ ಚಾಚುವ ಮೂಲಕ ವಿಜಯೋತ್ಸವವನ್ನು ಕಾರ್ಯಕರ್ತರ ಕುಟುಂಬಕ್ಕೆ ನೆರವಾಗುವ ಮೂಲಕ ಆಚರಿಸಿಕೊಂಡರು.
ಬಂಟ್ವಾಳದಲ್ಲಿ ಬಿಜೆಪಿ ಜಯಭೇರಿ ಭಾರಿಸಿದ ಹಿನ್ನಲೆಯಲ್ಲಿ ಬೃಹತ್ ವಿಜಯೋತ್ಸವ ಆಚರಿಸಲು ಆರಂಭದಲ್ಲಿ ರೂಪುರೇಷೆ ಸಿದ್ದಪಡಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಆಡಂಬರದ ವಿಜಯೋತ್ಸವ ರದ್ದುಗೊಳಿಸಿದ ಶಾಸಕ ಯು ರಾಜೇಶ್ ನಾಯಕ್ ಮೃತ ಕಾರ್ಯಕರ್ತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿಯಂತೆ ನಾಲ್ಕು ಕುಟುಂಬಕ್ಕೆ ಒಟ್ಟು 8 ಲಕ್ಷ ರೂಪಾಯಿ ನೆರವು ನೀಡಿ ಸೈ ಎನಿಸಿಕೊಂಡರು.
ಕಲ್ಲಡ್ಕ ಸಮೀಪದ ಬೋಳಂಗಡಿ ನರಹರಿ ಪರ್ವತದ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ ವಿಜಿತ್ ಗುರುವಾಯನಕೆರೆ, ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಅಮ್ಮುಂಜೆ ನಿವಾಸಿ ಜನಾರ್ದನ ಬಾರಿಂಜೆ, ಮತದಾರರ ಮನೆ ಭೇಟಿ ಕಾರ್ಯಕ್ರಮದ ವೇಳೆ ಹೃದಯಾಘಾತದಿಂದ ಮೃತಪಟ್ಟ ಪ್ರವೀಣ್ ಚಂದ್ರ ನಾಯಕ್ ಹಾಗೂ ಅನಾರೋಗ್ಯದಿಂದ ಮೃತಪಟ್ಟ ರೂಪೇಶ್ ಪೂಜಾರಿ ಸರಪಾಡಿ ಅವರ ಕುಟುಂಬದ ಸದಸ್ಯರನ್ನು ಕಚೇರಿಗೆ ಕರೆಸಿದ ಶಾಸಕರು ಈ ಸಹಾಯಧನ ಹಸ್ತಾಂತರಿಸಿ ಋಣ ತೀರಿಸುವ ಪ್ರಯತ್ನ ನಡೆಸಿದ್ದಾರೆ.
ಈ ಸಂದರ್ಭ ಪಕ್ಷ ಪ್ರಮುಖರಾದ ದೇವಪ್ಪ ಪೂಜಾರಿ, ದೇವದಾಸ್ ಶೆಟ್ಟಿ, ರವೀಶ್ ಶೆಟ್ಟಿ ಕರ್ಕಳ, ಸುಲೋಚನ ಜಿ ಕೆ ಭಟ್, ಮಾದವ ಮಾವೆ, ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ, ಗಣೇಶ್ ರೈ ಮಾಣಿ, ಯಶೋಧರ ಕರ್ಬೆಟ್ಟು, ರಾಜಾರಾಂ ನಾಯಕ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment