ಬಂಟ್ವಾಳ, ಮೇ 29, 2023 (ಕರಾವಳಿ ಟೈಮ್ಸ್) : ಈ ಬಾರಿ ಮುಂಗಾರು ತಡವಾಗುತ್ತಿರುವ ಸೂಚನೆ ಇರುವ ಹಿನ್ನಲೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಲ್ಲ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಟ್ಯಾಂಕರ್ ಮೂಲಕವಾದರೂ ಜನರಿಗೆ ಕುಡಿಯುವ ನೀರು ಒದಗಿಸಿ ಸ್ಪಂದಿಸಬೇಕು ಎಂದು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮುಂಗಾರು ಮುನ್ನೆಚ್ಚರಿಕೆ ಸಹಿತ ವಿವಿಧ ಸಮಸ್ಯೆಗಳ ಕುರಿತು ಸೋಮವಾರ ಬಿ ಸಿ ರೋಡಿನ ಎಸ್ ಜೆ ಎಸ್ ವೈ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ರಾಜೇಶ್ ನಾಯಕ್ ಮುಂಗಾರು ಆರಂಭವಾದ ಬಳಿಕ ಉಂಟಾಗಬಹುದಾದ ಪಾಕೃತಿಕ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸದಾ ಸನ್ನದ್ದ ಸ್ಥಿತಿಯಲ್ಲಿರಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಮೊಬೈಲ್ ಕರೆಗೆ ಸಿಗದಂತಹ ಪರಿಸ್ಥಿತಿ ಉಂಟಾಗಬಾರದು. ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇದ್ದು, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಸೂಚಿಸಿದರು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜೊತೆಯಾಗಿ ಕೆಲಸ ಮಾಡಿದರೆ, ಜನರ ಸಮಸ್ಯೆ ಪರಿಹರಿಸುವುದು ಸುಲಭ ಸಾಧ್ಯವಾಗಿದ್ದು, ಜನಸೇವೆ ಮಾಡುವ ಇಚ್ಛಾ ಶಕ್ತಿಯಿಂದ ಸಾಧ್ಯವಾದಷ್ಟು ಮಟ್ಟಿಗೆ ಜನರಿಗೆ ಗರಿಷ್ಠ ಸೇವೆ ನೀಡಬೇಕು ಎಂದ ಶಾಸಕ ನಾಯ್ಕ್ ರಸ್ತೆ ಬದಿಗಳಲ್ಲಿರುವ ಮರಗಳ ರೆಂಬೆ-ಕೊಂಬೆ ಕಡಿಯುವ ಕೆಲಸ ಸಕಾಲದಲ್ಲಿ ಮುಗಿಸಿ, ಚರಂಡಿ ವ್ಯವಸ್ಥೆಗಳನ್ನು ಸರಿಪಡಿಸಿ ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಅನಾಹುತವಾಗದಂತೆ ಮುನ್ನಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನರಿಕೊಂಬು ಗ್ರಾಮದ ಉಪುಗುಡ್ಡೆ ಪ್ರದೇಶದಲ್ಲಿ ಅಪಾಯದ ಸ್ಥಿತಿಯಲ್ಲಿರುವ ಬಂಟ್ವಾಳ ಪುರಸಭಾ ಕುಡಿಯುವ ನೀರಿನ ಟ್ಯಾಂಕ್ ಸಮರ್ಪಕ ಸ್ಥಿತಿಯಲ್ಲಿರುವಂತೆ ಪುರಸಭಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದ ಶಾಸಕ ರಾಜೇಶ್ ನಾಯಕ್ ತಗ್ಗು ಪ್ರದೇಶಗಳು ಹಾಗೂ ಮಳೆ ನೀರು ನಿಲ್ಲುವ ಪ್ರದೇಶಗಳಲ್ಲಿ ವಾಸ್ತವ್ಯ ಇರುವ ಜನತೆಗೆ ಮಳೆಗಾಲಕ್ಕೆ ಮುಂಚಿತವಾಗಿ ಮುನ್ನಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಬೇಕು ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು ತಹಶೀಲ್ದಾರ್ ಬಿ ಎಸ್ ಕೂಡಲಗಿ ಸಹಿತ ತಾಲೂಕು ಮಟ್ಟದ ಅಧಿಕಾರಿಗಳು ಶಾಸಕರ ಸಭೆಯಲ್ಲಿ ಭಾಗವಹಿಸಿದ್ದರು.
0 comments:
Post a Comment